ಸಮಾಜಕ್ಕೆ ಅಗತ್ಯವಾದ ಸೇವಾ ಕಾರ್ಯ ನಡೆಸಿ: ಸಿ.ಎ.ದೇವ್ ಆನಂದ್

KannadaprabhaNewsNetwork |  
Published : Jan 10, 2025, 12:49 AM IST
೦೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ರೋಟರಿ ಕ್ಲಬ್ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಡಿ.ರವೀಂದ್ರ ಅವರನ್ನು ಸನ್ಮಾನಿಸಲಾಯಿತು. ಸಿ.ಎ.ದೇವ್ ಆನಂದ್, ಸಿ.ಪಿ.ರಮೇಶ್, ಎಚ್.ಎಸ್.ನಟೇಶ್, ಡಾ.ನವೀನ್, ಬಿ.ಎಸ್.ಸಾಗರ್ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ರೋಟರಿ ಸಂಸ್ಥೆ ಸದಸ್ಯರು ಸಮಾಜಕ್ಕೆ ಅಗತ್ಯ ಸೇವಾ ಕಾರ್ಯಗಳನ್ನು ನಡೆಸಬೇಕು ಎಂದು ರೋಟರಿ ಜಿಲ್ಲೆ ೩೧೮೨ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಹೇಳಿದರು.

ಪಟ್ಟಣದ ರೋಟರಿ ಕ್ಲಬ್ ಬುಧವಾರ ಆಯೋಜಿಸಿದ್ದ ಜಿಲ್ಲಾ ಗವರ್ನರ್‌ರ ಅಧಿಕೃತ ಭೇಟಿ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರೋಟರಿ ಸಂಸ್ಥೆ ಸದಸ್ಯರು ಸಮಾಜಕ್ಕೆ ಅಗತ್ಯ ಸೇವಾ ಕಾರ್ಯಗಳನ್ನು ನಡೆಸಬೇಕು ಎಂದು ರೋಟರಿ ಜಿಲ್ಲೆ ೩೧೮೨ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಹೇಳಿದರು.ಪಟ್ಟಣದ ರೋಟರಿ ಕ್ಲಬ್ ಬುಧವಾರ ಆಯೋಜಿಸಿದ್ದ ಜಿಲ್ಲಾ ಗವರ್ನರ್‌ರ ಅಧಿಕೃತ ಭೇಟಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆ ಸದಸ್ಯರು ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು, ಹಳ್ಳಿಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಈ ಕೆಲಸ ಕಾರ್ಯಗಳು ಸಾರ್ವಜನಿಕರಿಗೆ ತಿಳಿಯಬೇಕು. ಆಗ ಸಂಸ್ಥೆ ಉತ್ತಮ ಹೆಸರು ತಂದು ಕೊಟ್ಟಂತಾಗುತ್ತದೆ.

ಸಂಸ್ಥೆಯಲ್ಲಿನ ಸದಸ್ಯರು ವಿಸ್ಮಯಕಾರಿ ಎನಿಸುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡಿದ್ದು, ರೋಟರಿ ಜಿಲ್ಲೆಯಿಂದ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಕೊಳ್ಳಬೇಕು ಎಂದರು.ಮಕ್ಕಳ ತಜ್ಞ ಡಾ.ಎಂ.ಬಿ. ರಮೇಶ್ ತಾವೇ ರಚಿಸಿದ ಕ್ಯಾನ್ಸರ್ ಅವೇರ್‌ನೆಸ್ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ವಿಶ್ವದಲ್ಲಿ ಪ್ರತೀ ವರ್ಷ 9 ಲಕ್ಷ ಜನರು ಕ್ಯಾನ್ಸರ್‌ನಿಂದ ಮರಣ ಹೊಂದುತ್ತಿದ್ದಾರೆ. ಪ್ರತೀ ವರ್ಷ 14 ಲಕ್ಷ ಕ್ಯಾನ್ಸರ್ ಪ್ರಕರಣ ಗಳು ದಾಖಲಾಗುತ್ತಿವೆ. ವಿಶ್ವದಲ್ಲಿ ಕ್ಯಾನ್ಸರ್ ರೋಗ ಮಾನವನನ್ನು ಕೊಲ್ಲುವ ಮೊದಲ ಕಾಯಿಲೆಯಾಗಿದೆ.ಮಾನವನ ದುಶ್ಚಟ, ಆಹಾರದಲ್ಲಿನ ಬದಲಾವಣೆ, ಜೀವಿತದ ಅವಧಿ ಹೆಚ್ಚಾಗುತ್ತಿರುವುದರಿಂದ ಕ್ಯಾನ್ಸರ್ ಕಾಯಿಲೆ ಹೆಚ್ಚುತ್ತಿದೆ. ಪ್ರಾರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡಿದಾಗ ಕ್ಯಾನ್ಸರ್ ತಡೆಗಟ್ಟಲು ಹಾಗೂ ಉತ್ತಮ ಚಿಕಿತ್ಸೆ ಪಡೆದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಡಿ. ರವೀಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಮಕ್ಕಳಿಗೆ ಜೀವನ ಮೌಲ್ಯ ಗಳನ್ನು ಹೇಳಿಕೊಡುವ ಕೆಲಸಗಳು ಆಗಬೇಕಿದ್ದು, ಇಂದು ಮಲೆನಾಡು ವೃದ್ಧಾಶ್ರಮವಾಗಿ ಪರಿವರ್ತನೆ ಆಗುತ್ತಿರುವುದು ಆತಂಕಕಾರಿಯಾಗಿದೆ.ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡಲು ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿ ರುವುದು ವಿಷಾದನೀಯ. ಇಂತಹ ಘಟನೆಗಳು ಮರುಕಳಿಸದಂತೆ ಇರಲು ವ್ಯಕ್ತಿತ್ವ ವಿಕಸನದ ಚಟುವಟಿಕೆಗಳಿಗೆ ಒತ್ತು ನೀಡಬೇಕಿದೆ. ಪೋಷಕರು ಇಂದು ನಮ್ಮ ಮಕ್ಕಳಿಗೆ ಅಂಕ ಗಳಿಸಲು, ಕೆಲಸ ಗಳಿಸಲು ಮಾತ್ರ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಅವರ ಜೀವನಕ್ಕೆ ಬೇಕಾದ ಶಿಕ್ಷಣ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ. ಇದು ಮೊದಲು ಆಗಬೇಕಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಕಾರ್ಯದರ್ಶಿ ಬಿ.ಎಸ್.ಸಾಗರ್, ಅಸಿಸ್ಟೆಂಟ್ ಗವರ್ನರ್ ಎಚ್.ಎಸ್.ನಟೇಶ್, ಜೋನಲ್ ಲೆಫ್ಟಿನೆಂಟ್ ಡಾ.ನವೀನ್ ಲಾಯ್ಡ್ ಮಿಸ್ಕಿತ್, ರೇಖಾ ದೇವ್ ಆನಂದ್, ಸಿ.ವಿ.ಸುನೀಲ್, ಎಚ್.ಕೆ.ವೆಂಕಟೇಶ್ ಭಟ್, ಎಂ.ಸಿ.ಯೋಗೀಶ್, ಎ.ಆರ್.ಸುರೇಂದ್ರ ಮತ್ತಿತರರು ಹಾಜರಿದ್ದರು.

೦೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರೋಟರಿ ಕ್ಲಬ್ ನಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಡಿ.ರವೀಂದ್ರರನ್ನು ಸನ್ಮಾನಿಸಲಾಯಿತು. ಸಿ.ಎ.ದೇವ್ ಆನಂದ್, ಸಿ.ಪಿ.ರಮೇಶ್, ಎಚ್.ಎಸ್.ನಟೇಶ್, ಡಾ.ನವೀನ್, ಬಿ.ಎಸ್.ಸಾಗರ್ ಇದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ