ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರವು ಯಾವುದೇ ಪೂರ್ವಭಾವಿ ಯೋಜನೆಗಳಿಲ್ಲದೆ, ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಸಭೆಗಳನ್ನು ನಡೆಸದೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವಕ್ಕೆ ಅವಕಾಶ ನೀಡಿದ ಪರಿಣಾಮ ಚಿನ್ನಸ್ವಾಮಿ ಕ್ರೀಂಡಾಂಗಣದ ಬಳಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಒತ್ತಾಯಿಸಿದರು.
ಪ್ರಾಮಾಣಿಕ ಅಧಿಕಾರಿಗಳ ಅಮಾನತು
ಸಾರ್ವಜನಿಕರನ್ನು ದಿಕ್ಕು ತಪ್ಪಿಸಲು ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳನ್ನು ಅಮಾನತುಪಡಿಸಿದ್ದಾರೆ. ಆದರೆ ಪೊಲೀಸರ ಸಮ್ಮತಿ ಇಲ್ಲದೆ ಆಯೋಜಿಸಿದ್ದ ಸರ್ಕಾರದ ತರಾತುರಿ ಕಾರ್ಯಕ್ರಮಕ್ಕೆ ಕಾಲಾವಕಾಶ ನೀಡಿ ನಾವು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದರೂ ಕೇಳದೆ ಜನಪ್ರತಿನಿಧಿಗಳು ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಂದ ಛೀಮಾರಿ ಹಾಕುವುದನ್ನು ತಪ್ಪಿಸಿಕೊಳ್ಳಲು ಪೊಲೀಸ್ ಇಲಾಖೆ ಮೇಲೆ ತಪ್ಪು ಹೊರೆಸುವ ಕುತಂತ್ರ ಮಾಡಿರುವುದು ಖಂಡನೀಯ ಎಂದರು. ಮುಂಬೈನಲ್ಲಿ ೫ ದಿನದ ಚಾಂಪಿಯನ್ ಶಿಪ್ ಪಂದ್ಯಾವಾಳಿಯ ವಿಜಯೋತ್ಸವದಲ್ಲಿ ೨೫ ಲಕ್ಷ ಮಂದಿ ಸೇರಿದ್ದರೂ, ಚೆನೈನಲ್ಲಿ ಗೆದ್ದಾಗಲೂ ಜನಸಾಗರವೇ ನೆರೆದಿತ್ತು ಆಗಲೂ ಒಂದು ಅಹಿತಕರ ಘಟನೆ ನಡೆಯಲಿಲ್ಲವೆಂದು ಅನೇಕ ಉದಾಹರಣೆ ನೀಡಿದ ಅವರು, ಸರ್ಕಾರದ ನಿರ್ವಹಣೆಯ ವೈಫಲ್ಯತೆಯಿಂದ ೧೧ ಮಂದಿ ಪ್ರಾಣತೆತ್ತು ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದರು.ಮಾನವೀಯತೆ ಮರೆತ ನಾಯಕರು
ಸರ್ಕಾರವನ್ನು ವಜಾ ಮಾಡಲಿ
ರಾಜ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಕ್ರೀಡಾ ಪ್ರೇಮಿಗಳಿದ್ದಾರೆ, ೩೫ ಸಾವಿರ ಜನರ ಸಾಮರ್ಥದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಲಕ್ಷಾಂತರ ಜನರು ಜಮಾಯಿಸಿದ್ದಾರೆ ಇವರನ್ನು ನಿರ್ವಹಣೆ ಮಾಡುವುದು ಹೇಗೆಂಬ ಕನಿಷ್ಟ ಪ್ರಜ್ಞೆ ಇಲ್ಲದೆ ತುಘಲಕ್ ದರ್ಬಾರ್ ಮಾಡಲು ಹೋಗಿ ಅಮಾಯಕ ೧೧ ಮಂದಿ ಯುವಕ-ಯುವಕರನ್ನು ಅನ್ಯಾಯವಾಗಿ ಬಲಿ ತೆಗೆದುಕೊಂಡಿದ್ದಾರೆ. ಇಂತಹ ಬೇಜವಾಬ್ದಾರಿ ಆಡಳಿತಕ್ಕೆ ಕಾರಣವಾದ ಸರ್ಕಾರವನ್ನು ರಾಜ್ಯಪಾಲರು ಕೊಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ವಿಜಯಕುಮಾರ್, ಸಾ.ಮಾ.ಅನಿಲ್ ಬಾಬು, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಓಹಿಲೇಶ್, ಅಂಬರೀಷ್, ಮಹೇಶ್, ವೆಂಕಟೇಶ್, ಅರುಣಮ್ಮ, ನಾಮಾಲ್ ಮಂಜು, ಚಲಪತಿ, ಬಾಲಾಜಿ, ಸುರೇಶ್ ಇದ್ದರು.