ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರದ ಅತೀ ಸೂಕ್ಷ್ಮ ಪ್ರದೇಶವಾದ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಮಲಯಾಳಂ ಭಾಷೆಯ ಸಿನಿಮಾಗೆ ನಿಯಮ ಮೀರಿ ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಆದೇಶ ಮಾಡಿರುವ ಅಂಶ ಬೆಳಕಿಗೆ ಬಂದಿದೆ.ಏ.8 ರಂದು ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು)ಗೆ ಪತ್ರ ಬರೆದಿದ್ದಾರೆ.
ಆ ಪತ್ರದ ಪ್ರಕಾರ ಏ.8 ರಂದು ಬೆಳಗ್ಗೆ 6.30 ರಿಂದ ಸಂಜೆ 7 ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್.ಬೆಟ್ಟ(ಗೋಪಾಲಸ್ವಾಮಿ ಬೆಟ್ಟ) ವಲಯದ ವ್ಯಾಪ್ತಿಗೆ ಒಳಪಡುವ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಚಲನಚಿತ್ರ ಚಿತ್ರೀಕರಿಸಲು ಅನುಮತಿ ನೀಡಲಾಗಿದೆ.ನಿಯಮ ಏನ್ ಹೇಳುತ್ತೇ! :
ವನ್ಯಜೀವಿ ಸಂರಕ್ಷಣಾ ಕಾನೂನಿನ 1972 ಸೆಕ್ಷನ್ 28 ರ ಪ್ರಕಾರ ಎಲ್ಲಾ ರಾಷ್ಟ್ರೀಯ ಉದ್ಯಾನ, ವನ್ಯ ಜೀವಿಧಾಮ, ಹುಲಿ ಯೋಜನಾ ಪ್ರದೇಶಗಳಲ್ಲಿ ಚುಟುವಟಿಕೆಗಳಿಗೆ ಸಂಜೆ 6 ರ ತನಕ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ ಸಂಜೆ 7 ಗಂಟೆ ತನಕ ಅನುಮತಿ ನೀಡಿರುವುದು ಕಾನೂನು ಬಾಹಿರ.ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ, ಹುಲಿ ಯೋಜನಾ ಪ್ರದೇಶಗಳಲ್ಲಿ ವನ್ಯಜೀವಿ, ಇತಿಹಾಸ, ಸ್ಥಳೀಯ ಜನರ ಬಗ್ಗೆ, ಈ ತರಹದ ಅರಿವು ಮೂಡಿಸುವ ಸಾಕ್ಷ್ಯಚಿತ್ರಗಳನ್ನು ಬಿಟ್ಟು ಇತರೆ ವಾಣಿಜ್ಯ ಚಲನ ಚಿತ್ರಗಳಿಗೆ ಅನುಮತಿ ನೀಡುವುದು ಸರಿಯಲ್ಲ ಎಂದು ಕಾಯ್ದೆ ಹೇಳುತ್ತೇ.
ಆದೇಶ ಇಂತಿದೆ!:ಸದರಿ ಪ್ರಸ್ತಾವನೆಯಲ್ಲಿ ಸರ್ಕಾರದ ಆದೇಶಗಳಲ್ಲಿ ತಿಳಿಸಿರುವ ಷರತ್ತಿಗೊಳಪಟ್ಟು ನಿಗದಿತ ಠೇವಣಿ/ಶುಲ್ಕವನ್ನು ಮುಂಗಡವಾಗಿ ನಿಯಮಾನುಸಾರ ಪಾವತಿಸಿಕೊಳ್ಳುವುದು ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಯಾವುದೇ ನಿರ್ದಿಷ್ಟ ಷರತ್ತುಗಳ ಅವಶ್ಯಕತೆ ಇದ್ದಲ್ಲಿ ಇಲಾಖಾ ವತಿಯಿಂದ ನಮೂದಿಸುವುದು. ಸದರಿ ಚಿತ್ರೀಕರಣವನ್ನು ಏ.8 ರಂದು ಚಿತ್ರೀಕರಿಸಲು ಅನುಮತಿ ನೀಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಶಿವಪ್ರಕಾಶ್ ತಿಳಿಸಿದ್ದಾರೆ.