ಪೌರಕಾರ್ಮಿಕರ ಮಕ್ಕಳಿಗೆ ವೈಯಕ್ತಿಕ ಪ್ರೊತ್ಸಾಹ ಧನ

KannadaprabhaNewsNetwork |  
Published : Sep 24, 2025, 01:04 AM IST
ಜಮಖಂಡಿ ನಗರದ ಬಸವಭವನದಲ್ಲಿ ಪೌರಕಾರ್ಮಿಕರ ದಿನವನ್ನು ಆಚರಿಸಲಾಯಿತು.  | Kannada Prabha

ಸಾರಾಂಶ

ಪೌರ ಕಾರ್ಮಿಕರಿಲ್ಲದ ನಗರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ರೀತಿಯ ಕಸವನ್ನು ತೆಗೆದು ನಗರ ಸ್ವಚ್ಛವಾಗಿರಿಸಲು ಪ್ರತಿನಿತ್ಯ ಶ್ರಮಿಸುತ್ತಾರೆ ಅವರ ಸೇವೆ ಅಸಾಮಾನ್ಯ

ಕನ್ನಡಪ್ರಭ ವಾರ್ತೆ ಜಮಖಂಡಿ

ಹಗಲಿರುಳೆನ್ನದೇ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ಮಕ್ಕಳು 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ₹5 ಸಾವಿರ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಥಮ ₹15 ಸಾವಿರ, ದ್ವಿತೀಯ ₹10 ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ₹5 ಸಾವಿರ ಪ್ರೋತ್ಸಾಹ ಧನವನ್ನು ವೈಯಕ್ತಿಕವಾಗಿ ನೀಡುವುದಾಗಿ ಶಾಸಕ ಜಗದೀಶ ಗುಡಗುಂಟಿ ಘೋಷಣೆ ಮಾಡಿದರು.

ನಗರದ ಬಸವಭವನದಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ ₹5 ಸಾವಿರ ಧನಸಹಾಯ ಮಾಡುವುದಾಗಿ ತಿಳಿಸಿದರು. ಪೌರ ಕಾರ್ಮಿಕರಿಲ್ಲದ ನಗರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ರೀತಿಯ ಕಸವನ್ನು ತೆಗೆದು ನಗರ ಸ್ವಚ್ಛವಾಗಿರಿಸಲು ಪ್ರತಿನಿತ್ಯ ಶ್ರಮಿಸುತ್ತಾರೆ ಅವರ ಸೇವೆ ಅಸಾಮಾನ್ಯವಾದದ್ದು. ಪ್ರಧಾನಿ ಮೋದಿಯವರು ಪೌರಕಾರ್ಮಿಕರ ಪಾದ ತೊಳೆದು ಗೌರವ ಸಲ್ಲಿಸಿದ್ದಾರೆ. ಪ್ರತಿಯೊಬ್ಬರೂ ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಪೌರಕಾರ್ಮಿಕರ ಮದುವೆಗೆ 50 ಸಾವಿರ ಸಹಾಯಧನ ನೀಡುವ ಕಾನೂನು ಇದೆ ಆದರೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಮುಗ್ಗರಿಸಿದ್ದು ಈ ಮೊತ್ತ ನೀಡಲಾಗಿಲ್ಲ. ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಬೇಕು. ಮಕ್ಕಳನ್ನು ಚನ್ನಾಗಿ ಓದಿಸಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ ಮಾತನಾಡಿ, ಪೌರಕಾರ್ಮಿಕರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ, ಕಳೆದ ಸುಮಾರು 10 ವರ್ಷಗಳಿಂದ ಪೌರಕಾರ್ಮಿಕರನ್ನು ಸರ್ಕಾರಗಳು ಗುರುತಿಸಿವೆ. ಅನೇಕ ಸೌಲಭ್ಯಗಳನ್ನು ಒದಗಿಸಿವೆ. ಗೃಹ ನಿರ್ಮಾಣಕ್ಕೆ ₹7.5ಲಕ್ಷ ಧನ ಸಹಾಯ ನೀಡಲಾಗುತ್ತಿದೆ. 15 ಜನರಿಗೆ ಅನುಕೂಲವಾಗಿದೆ ಹಾಗೂ ಇನ್ನೂ 4 ಜನ ಪೌರಕಾರ್ಮಿಕರಿಗೆ ಸರ್ಕಾರ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಂಜೂರಾಗಿದೆ. ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಪೌರ ಕಾರ್ಮಿಕರ ಮಕ್ಕಳಿಗೆ ನೇರವಾಗಿ ದಾಖಲಾತಿ ನೀಡಲಾಗುತ್ತಿದೆ. ನಿವೇಶನ ಖರೀದಿಗೆ ₹2.5 ಲಕ್ಷ ಧನ ಸಹಾಯ, ಪ್ರತಿವರ್ಷ 21 ದಿನಗಳ ಬೋನಸ್‌ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಅಧ್ಯಯನ ಪ್ರವಾಸ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಓಲೇಮಠದ ಆನಂದ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಗರಸಭೆ ಸದಸ್ಯರಾದ ಅನಸೂಯಾ ಅಸುಗಡೆ, ಪ್ರಶಾಂತ ಚರಕಿ, ಸುನೀಲ ಸಿಂಧೆ, ದಿಲಾವರ ಶಿರೋಳ, ಕುಶಾಲ ವಾಘಮೊರೆ, ಮುಂತಾದವರಿದ್ದರು. ಅಧಿಕಾರಿ ಕುಸುಮಾ ಸೊಪಡ್ಲ ಸ್ವಾಗತಿಸಿದರು. ಸದಸ್ಯ ಪ್ರಕಾಶ ಹಂಗರಗಿ ನಿರೂಪಿಸಿದರು. ಪೌರಾಯುಕ್ತ ಜ್ಯೋತಿಗಿರೀಶ ಪ್ರಾರ್ಥನೆ ಹಾಗೂ ವಂದನಾರ್ಪಣೆ ಮಾಡಿದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ