ಪೆಟ್ರೋಲ್ ಬಂಕ್‌ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ; ಹಣ ದೋಚಿ ದುಷ್ಕರ್ಮಿಗಳು ಪರಾರಿ

KannadaprabhaNewsNetwork | Published : Mar 13, 2025 12:52 AM

ಸಾರಾಂಶ

ನಗರದ ಸುಧಾ ಕ್ರಾಸ್ ಬಳಿಯ ಜಂಜಂ ಪೆಟ್ರೋಲ್ ಬಂಕ್‌ ನ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬಳಿಕ ಬಂಕ್‌ನಲ್ಲಿದ್ದ ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಸುಧಾ ಕ್ರಾಸ್ ಬಳಿಯ ಜಂಜಂ ಪೆಟ್ರೋಲ್ ಬಂಕ್‌ ನ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬಳಿಕ ಬಂಕ್‌ನಲ್ಲಿದ್ದ ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ದರೋಡೆಕೋರರನ್ನು ಇಲ್ಲಿನ ಬಾಪೂಜಿನಗರ, ಶ್ರೀರಾಂಪುರ ಕಾಲನಿ ಹಾಗೂ ಮಿಲ್ಲಾರ್‌ಪೇಟೆಯ ಯುವಕರು ಎಂದು ತಿಳಿದು ಬಂದಿದೆ. ಸಿಬ್ಬಂದಿ ಕಿಶೋರ್ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:

ಬಂಕ್‌ಗೆ ಮಂಗಳವಾರ ತಡರಾತ್ರಿ ಆಗಮಿಸಿದ ಸುಮಾರು 11 ಜನ ಯುವಕರ ಗುಂಪು ಪೆಟ್ರೋಲ್ ಹಾಕುವಂತೆ ಕೇಳಿಕೊಂಡಿದ್ದಾರೆ. ಈಗಾಗಲೇ ಸಮಯವಾಗಿದ್ದು ಬಂಕ್ ಮುಚ್ಚಲಾಗಿದೆ ಎಂದು ಕಿಶೋರ್ ತಿಳಿಸಿದ್ದಾರೆ. ದೂರದ ಊರಿಗೆ ತೆರಳಬೇಕಾಗಿದ್ದು ಪೆಟ್ರೋಲ್ ಹಾಕುವಂತೆ ದಯನೀಯವಾಗಿ ಕೇಳಿಕೊಂಡಿದ್ದಾರೆ. ಹೀಗಾಗಿ ಕಿಶೋರ್ ಪೆಟ್ರೋಲ್ ಹಾಕಿದ್ದಾರೆ. ಬಳಿಕ ಹಣ ನೀಡಲು ನಿರಾಕರಿಸಿರುವ ಯುವಕರ ಗುಂಪು ಅಲ್ಲಿಂದ ಪರಾರಿಯಾಗಲು ಯತ್ನಿಸಿದೆ. ಇದನ್ನು ವಿರೋಧಿಸಿದ ಕಿಶೋರ್ ಹಣ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಕೆರಳಿದ ದುಷ್ಕರ್ಮಿಗಳು ಕಿಶೋರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರಲ್ಲದೆ, ಬಂಕ್‌ನಲ್ಲಿದ್ದ ₹1.50 ಲಕ್ಷ ದರೋಡೆಗೈದು ಪರಾರಿಯಾಗಿದ್ದಾರೆ. ಘಟನೆಯಿಂದ ಕಿಶೋರ್ ತೀವ್ರ ಗಾಯದ ನಡುವೆ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸ್ ಜೀಪ್ ಆಗಮಿಸಿದೆಯಾದರೂ ಅಷ್ಟೊತ್ತಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೌಲ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ. ಶೋಭಾರಾಣಿ ತಿಳಿಸಿದ್ದಾರೆ. ಉಳಿದವರನ್ನು ಕೂಡಲೇ ಬಂಧಿಸುವ ಕೆಲಸವಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದಲ್ಲಿ ಹೆಚ್ಚಿದ ಕುಡುಕರ ಹಾವಳಿ:

ತಡರಾತ್ರಿವರೆಗೆ ಮದ್ಯದ ಅಂಗಡಿಗಳು ಕಾನೂನುಬಾಹಿರವಾಗಿ ತೆರೆಯುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲವಾಗಿದೆ. ಹೀಗಾಗಿಯೇ ನಗರದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ನಾನಾ ದುಷ್ಕೃತ್ಯಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ.

ಮಂಗಳವಾರ ಜರುಗಿದ ಸಿಡಿಬಂಡಿ ರಥೋತ್ಸವ ದಿನ ನಗರದಲ್ಲಿ ಮದ್ಯದ ಮಾರಾಟಕ್ಕೆ ನಿಷೇಧವಿರಲಿಲ್ಲ. ಹೀಗಾಗಿ ದೇವಸ್ಥಾನದ ಆಸುಪಾಸಿನ ಮದ್ಯದ ಅಂಗಡಿಗಳಲ್ಲಿ ಮದ್ಯಪ್ರಿಯರು ಮುಗಿಬಿದ್ದು ಮದ್ಯ ಖರೀದಿಸಿದರು. ಇದರಿಂದ ಸಿಡಿಬಂಡಿಗೆ ಬರುವ ಭಕ್ತರು ಹಾಗೂ ಮಹಿಳೆಯರು ತೀವ್ರ ಮುಜುಗರ ಅನುಭವಿಸಿದರು.

ನಗರದ ನಾನಾ ಕಡೆ ಸಿಡಿಬಂಡಿ ಉತ್ಸವದ ದಿನದಲ್ಲೂ ಮಧ್ಯರಾತ್ರಿವರೆಗೆ ವ್ಯಾಪಾರ ವಹಿವಾಟು ನಡೆದಿದೆ. ಕುಡಿತದ ಅಮಲಿನಲ್ಲಿದ್ದ ಯುವಕರ ಗುಂಪು ಸುಧಾಕ್ರಾಸ್‌ ಬಳಿಯ ಪೆಟ್ರೋಲ್ ಬಂಕ್‌ಗೆ ತೆರಳಿ ಸಿಬ್ಬಂದಿಯನ್ನು ಮರಾಂತಿಕವಾಗಿ ಹಲ್ಲೆ ನಡೆಸಿ, ಬಂಕ್‌ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಮದ್ಯಮಾರಾಟದ ಮೇಲೆ ನಿಯಂತ್ರಣ ಹೇರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share this article