ಶಿವಮೊಗ್ಗ: ಯೋಗ, ಪ್ರಾಣಾಯಾಮ, ಧ್ಯಾನ ಸದಾ ನಮ್ಮನ್ನು ಸಕಾರಾತ್ಮಕ ಭಾವನೆ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಒದಗಿಸುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಮ್ಮ ದೇಹದಲ್ಲಿ ಇರುವ ಪ್ರತಿಯೊಂದು ಅಂಗಾಂಗಗಳು ಸಮಾತೋಲನದಿಂದ ಹಾಗೂ ನೆಮ್ಮದಿಯಿಂದ ಇರಬೇಕಾದರೆ ಯೋಗ ಪ್ರಾಣಾಯಾಮ ಹಾಗೂ ಧ್ಯಾನವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.
ಯೋಗದಿಂದ ನಮ್ಮ ಆಯಸ್ಸು ವೃದ್ಧಿಯಾಗುವುದರ ಜೊತೆಗೆ ಸದಾ ಲವಲವಿಕೆಯಿಂದ ಇರಲು ಸಾಧ್ಯ. ಕಾಯಿಲೆ ಮುಕ್ತರಾಗಿ ಇರಲು ಯೋಗವು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಇಂದು ಪ್ರಪಂಚದ 197 ದೇಶಗಳಲ್ಲಿ ಯೋಗ ಪ್ರಾಣಾಯಾಮ, ಧ್ಯಾನಕ್ಕೆ ವಿಶೇಷ ಮಹತ್ವ ದೊರಕಿದೆ. ಯೋಗ ಎಂದರೆ ಈಗ ಸಾಮಾನ್ಯರ ಗ್ರಹಿಕೆಯಲ್ಲಿ ಆಸನಗಳು ಮಾತ್ರ. ಆದರೆ, ಯೋಗ ದರ್ಶನದ ವ್ಯಾಪ್ತಿ ಇನ್ನೂ ವಿಸ್ತಾರ ಹಾಗೂ ಆಳವು ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಚಂದ್ರಶೇಖರಯ್ಯ, ಸುಧಾಕರ್ ಮೊಗೇರಾ, ಮೋಹನ್, ಪ್ರಕಾಶ್, ವಿಜಯ ಬಾಯರ್, ಶ್ರೀಕಾಂತ್, ಜಿ.ವಿಜಯಕುಮಾರ್ ಮತ್ತಿತರರಿದ್ದರು.