ಮುಂಡರಗಿ: ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಸೋಮವಾರ ರಾತ್ರಿ 11.50ರ ವೇಳೆಗೆ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದ ಪರಿಣಾಮ ಗ್ರಾಮದ 8-10 ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿನ ದವಸ ಧಾನ್ಯಗಳು ಸೇರಿದಂತೆ ವಿವಿಧ ವಸ್ತುಗಳು ಹಾನಿಗೀಡಾಗಿವೆ. ಗ್ರಾಮಸ್ಥರು ಗದಗ-ಬೆಟಗೇರಿ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಮುಂಡರಗಿ ತಾಲೂಕಿನ ಹಮ್ಮಿಗಿ ಹತ್ತಿರವಿರುವ ಸಿಂಗಟಾಲೂರು ಏತನೀರಾವರಿ ಬ್ಯಾರೇಜ್‌ನಿಂದ ನೇರವಾಗಿ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹೋಗಿದ್ದು, ಅದು ಕಳೆದ 7-8 ತಿಂಗಳಿನಿಂದ ಸಣ್ಣದಾಗಿ ಸೋರುತ್ತಿದೆ. ಈ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಹಾಗೂ ಸಿಂಗಟಾಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗದಗ ಬೆಟಗೇರಿ ನಗರಸಭೆಗೆ ಪತ್ರಬರೆದು ಪೈಪ್‌ಲೈನ್ ದುರಸ್ತಿ ಮಾಡಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ತಿರುಗಿ ಸಹ ನೋಡಿಲ್ಲ.
ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಪೈಪ್ ಒಡೆದಿದ್ದರ ಪರಿಣಾಮವಾಗಿ ಜೋರಾಗಿ ನೀರು ಅಲ್ಲಿನ ಸುತ್ತಮುತ್ತಲಿನ ಮನೆಗಳ ಮೇಲೆ ಹಾಗೂ ಮನೆಗಳ ಮುಂದೆ ಹರಿದು ಹೋಗಿದೆ. ಹರಿದು ಹೋಗುವ ವೇಳೆ ಸಿಂಗಟಾಲೂರು ಗ್ರಾಮದ ಸುಮಾರು 8-10 ಮನೆಗಳಿಗೆ ಬಾಗಿಲಿನ ಸಂದಿಯ ಮೂಲಕ ಮನೆ ಹೋಕ್ಕು ನಂತರ ನೀರಿನ ರಭಸಕ್ಕೆ ಮನೆಯಲ್ಲಿನ ಪಾತ್ರೆ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳು ನೀರಿನಲ್ಲಿ ತೇಲಿ ಹೋಗಿವೆ ಎನ್ನಲಾಗುತ್ತಿದೆ. ಇದರಿಂದ ಸುಮಾರು 8-10 ಕುಟುಂಬಗಳ ಜನತೆ ಕಂಗಾಲಾಗಿದ್ದಾರೆ.ಪೈಪ್‌ಲೈನ್ ದುರಸ್ತಿ: ಸಿಂಗಟಾಲೂರು ಮೂಲಕ ಗದಗ-ಬೆಟಗೇರಿ ಅವಳಿ ನಗರಕ್ಕೆ ತೆರಳುವ ಎಕ್ಸಪ್ರೆಸ್ ಲೈನ್ ಹಲವು ತಿಂಗಳಿನಿಂದ ನೀರು ಸೋರಿಕೆಯಾಗುತ್ತಿದ್ದು, ಇದರಿಂದ ಈ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿರುವ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ಸದಾ ನೀರು ಹರಿಯುತ್ತಿರುವುದರಿಂದ ಸೊಳ್ಳೆಗಳು ಉತ್ಪಾದನೆಯಾಗುತ್ತಾ ರೋಗ ಹರಡುವ ಕೇಂದ್ರವಾಗಿ ಮಾರ್ಪಾಡಾಗುತ್ತಿದ್ದು, ತಕ್ಷಣವೇ ಪೈಪ್ ಲೈನ್ ದುರಸ್ತಿಗೊಳಿಸಬೇಕು ಎಂದು 2023ರ ನವೆಂಬರ್ 25ರಂದು ಗದಗ-ಬೆಟಗೇರಿ ನಗರಸಭೆ ಆಯುಕ್ತರಿಗೆ ಗ್ರಾಪಂ ಪಿಡಿಒ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇಂದು ಈ ಘಟನೆ ಜರುಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ, ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಿಂಗಟಾಲೂರು ಗ್ರಾಪಂ ಅಧ್ಯಕ್ಷ ಮೈಲಾರಪ್ಪ ಉದಂಡಿ ಆಗ್ರಹಿಸಿದರು.ರಾತ್ರಿ ಮಲಗಿದ್ವಿ, ಇದ್ದಕ್ಕಿದ್ದಾಂಗ ಮನ್ಯಾಗ್ ನೀರ್ ಬಂತು, ಮನ್ಯಾಗಿನ ಪಾತ್ರಿ, ಬಟ್ಟಿ, ಹಾಸಿಗೆ ಎಲ್ಲಾ ತೇಲಕೊಂಡ ಹೋಗ್ಯಾವ್, ಜ್ವಾಳಾ, ಕಾಳಕಡಿ ಹಾಳಾಗ್ಯಾವ್ ಅಧಿಕಾರಿಗಳ ನಮಗ್ ಪರಿಹಾರ ಕೊಡಬೇಕು ಸಿಂಗಟಾಲೂರು ಗ್ರಾಮಸ್ಥ ಹೊನ್ನಪ್ಪ ಗಾಜಿ ಆಗ್ರಹಿಸಿದ್ದಾರೆ.