ಸಹಕಾರ ಸಂಘ ಜನಸ್ನೇಹಿಯಾಗಿಸಲು ಯೋಜನೆ: ಎಂ.ಎಫ್. ಕಲ್ಲಗುಡಿ

KannadaprabhaNewsNetwork |  
Published : Feb 25, 2026, 02:30 AM IST
ಕಾರ್ಯಾಗಾರವನ್ನು ಎಂ.ಎಫ್. ಕಲ್ಲಗುಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲಾ ಸಹಕಾರ ಯುನಿಯನ್‌ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಅಗತ್ಯ ಮತ್ತು ವ್ಯವಹಾರ ಬೆಂಬಲ ಸೇವೆಗಳನ್ನು ಒದಗಿಸಲು ಸಹಾಯ ಮಾಡುವುದು ಮತ್ತು ಅವುಗಳನ್ನು ಗ್ರಾಮೀಣ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದರು.

ಗದಗ: ಗ್ರಾಮೀಣ ಜನರಿಗೆ ನೆರವಾಗಲು ಇನ್ನೂ ಹೆಚ್ಚಿನ ಯೋಜನೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೂಪಿಸಲಾಗಿದೆ ಎಂದು ಕೆಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಫ್. ಕಲ್ಲಗುಡಿ ತಿಳಿಸಿದರು.

ನಗರದ ದಿ ಚೇಂಬರ್ ಆಫ್ ಕಾಮರ್ಸ್ ಸಭಾಭವನದಲ್ಲಿ ಮಂಗಳವಾರ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯುನಿಯನ್ ಹಾಗೂ ಧಾರವಾಡದ ಕೆಸಿಸಿ ಬ್ಯಾಂಕ್ ಆಶ್ರಯದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವುದು, ಹೆಚ್ಚು ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತರಿಗೆ ರಸಗೊಬ್ಬರಗಳನ್ನು, ಕೃಷಿ ಉಪಕರಣಗಳನ್ನು ವಿತರಿಸುವುದು, ಇನ್ನು ಹಲವಾರು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಮುನ್ನಡೆಯುತ್ತಿವೆ. ರಸಗೊಬ್ಬರ ವಿತರಿಸಲು ಪಡೆದ ಪರವಾನಗಿಯನ್ನು ಸಕಾಲದಲ್ಲಿ ಸಂಘದ ಸಿಬ್ಬಂದಿ ನವಿಕರಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಪ್ಯಾಕ್ಸ್‌ಗಳಲ್ಲಿ ಇಆರ್‌ಪಿಯು ಬಳಕೆದಾರಸ್ನೇಹಿ ಸಾಫ್ಟ್‌ವೇರ್ ಆಗಿದ್ದು, ಐಕಾನ್‌ ಆಧರಿತ ಇಂಟರ್ಫೇಸ್ ಮತ್ತು ವರ್ಕಪ್ಲೋ ಚಾಲಿತ ವಿನ್ಯಾಸ ಹೊಂದಿದೆ. ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ ಈ ಸಾಫ್ಟ್‌ವೇರ್ ಸಂಘದ ಎಲ್ಲ ಚಟುವಟಿಕೆಗಳನ್ನು ಗಣಕೀಕರಿಸುತ್ತದೆ ಮತ್ತು ಮಧ್ಯಸ್ಥಗಾರರಿಗೆ ಅಗತ್ಯವಿರುವ ಎಲ್ಲ ವರದಿಗಳನ್ನು ಉತ್ಪಾದಿಸುತ್ತದೆ. ಸಂಘದ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಸಹಕಾರಿಯಾಗಿದೆ ಎಂದರು.

ಜಿಲ್ಲಾ ಸಹಕಾರ ಯುನಿಯನ್‌ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಅಗತ್ಯ ಮತ್ತು ವ್ಯವಹಾರ ಬೆಂಬಲ ಸೇವೆಗಳನ್ನು ಒದಗಿಸಲು ಸಹಾಯ ಮಾಡುವುದು ಮತ್ತು ಅವುಗಳನ್ನು ಗ್ರಾಮೀಣ ಕೇಂದ್ರಗಳಾಗಿ ಪರಿವರ್ತಿಸುವುದು. ಗ್ರಾಮೀಣ ಜನರಿಗೆ ಅವರ ಮನೆ ಬಾಗಿಲಿಗೆ ಕಡಿಮೆ ವೆಚ್ಚದ ಸೇವೆಗಳು, ಹೆಚ್ಚಿನ ವ್ಯಾಪ್ತಿ ಮತ್ತು ಸಾಲ ವಿತರಣೆಯ ಸುಧಾರಣೆಗಾಗಿ ಸಹಕಾರಿ ಸಂಘ ಇತರ ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ವಿಧಾನ, ಹೊಸ ವ್ಯವಹಾರಗಳು ಮತ್ತು ಆದಾಯ ಉತ್ಪಾದನೆಯ ಅವಕಾಶಗಳನ್ನು ಕಲ್ಪಿಸುವುದು ಮತ್ತು ಬದಲಾವಣೆಯನ್ನು ತರುವುದು ಈ ತರಬೇತಿಯ ಉದ್ದೇಶವಾಗಿದೆ. ತರಬೇತಿಯ ಸದುಪಯೋಗ ಪಡೆದುಕೊಂಡು ತಮ್ಮ ಸಂಘದ ಏಳ್ಗೆಗೆ ಶ್ರಮಿಸಬೇಕು ಎಂದರು.

ಕೃಷಿ ಅಧಿಕಾರಿ ಚೈತ್ರಾ ಬಿ.ಎಂ. ಮಾತನಾಡಿ, ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಬಳಕೆಯಿಂದ ಎಣ್ಣೆ ಕಾಳು ಬೆಳೆಗಳಲ್ಲಿ ಕಾಳಿನ ಗಾತ್ರ ಹೆಚ್ಚಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಪೊಟ್ಯಾಷ್ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 22:22:11, 14:35:14 ಸೇರಿದಂತೆ ಇತ್ಯಾದಿ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನೂ ಬಳಸಬಹುದಾಗಿದೆ ಎಂದರು.ಈ ವೇಳೆ ಸಂಜೀವಕುಮಾರ ನೆಗಳೂರು ಮಾತನಾಡಿದರು. ತರಬೇತಿ ಕಾರ್ಯಾಗಾರದಲ್ಲಿ ರಸಗೂಬ್ಬರಗಳ ಮಾರಾಟ ನಿರ್ವಹಣೆ ಕುರಿತು ಮೇಘನಾ ನಾಡಗೇರ, ಪ್ಯಾಕ್ಸ್‌ಗಳಲ್ಲಿ ಇಆರ್‌ಪಿ ಸಾಫ್ಟ್‌ವೇರ್ ಹಾಗೂ ಸಿಸ್ಟಮ್ ಅಡಿಟ್ ಕುರಿತು ಬಸವರಾಜ ಎಂ. ಮುಚ್ಚಕಣ್ಣವರ, ಯಶಸ್ವಿನಿ ಯೋಜನೆ ಕುರಿತು ಪ್ರಮೋದ ಕುಸುಬಿ ಹಾಗೂ ಜಿಎಸ್‌ಟಿ ನೋಂದಣಿ ಕುರಿತು ಪ್ರಕಾಶ ಬೇಲಿ ಅವರು ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪುಷ್ಪಾ ಕೆ. ಕಡಿವಾಳ, ಕೆ.ಸಿ. ಕೂಸನೂರಮಠ, ಬಿ.ಆರ್. ನಿಡಗುಂದಿ, ಪ್ರಶಾಂತ ಮುಧೋಳ, ಎಸ್.ಎಂ. ಚಿಕ್ಕಮಠ, ಡಿ.ಬಿ. ದೊಕ್ಕಣ್ಣವರ, ಎ.ಎ. ಶಾಬಾದಿ, ಸುನಿಲಕುಮಾರ ಚಳಗೇರಿ, ಸುರೇಶಕುಮಾರ ಎಸ್. ಸೇರಿದಂತೆ ಇತರರು ಇದ್ದರು. ಎಸ್.ವಿ. ಗರ್ಜಪ್ಪನವರ ಪ್ರಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವಾರದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಹಾಲು ಉತ್ಪಾದಕ ಸಂಘಗಳು ರೈತರ ಬೆನ್ನೆಲುಬು