ಯಲಬುರ್ಗಾ: ಪಟ್ಟಣದ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಸಹೋದರರು ಮಠದ ಭಕ್ತರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ನಡೆದುಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಶರಣಪ್ಪ ಬೇಲೇರಿ ಆಗ್ರಹಿಸಿದರು.
ಸಿದ್ಧರಾಮೇಶ್ವರ ಸ್ವಾಮೀಜಿ ಬಗ್ಗೆ ಭಕ್ತರು ಅಪಾರ ಗೌರವ ಹೊಂದಿದ್ದಾರೆ. ಭಕ್ತರು ಮಠದ ಲೆಕ್ಕಪತ್ರ ಕೇಳುವದನ್ನೇ ಸ್ವಾಮೀಜಿ ಹಾಗೂ ಅವರ ಸಹೋದರರು ತಪ್ಪು ಎಂಬ ಭಾವನೆ ಹೊಂದಿ ಕೋಪಗೊಳ್ಳುತ್ತಿರುವುದು ಸಮಂಜಸವಲ್ಲ. ಸ್ವಾಮೀಜಿಗಳು ತಪ್ಪು ಮಾಡಿದಾಗ ಸರಿದಾರಿಗೆ ತರುವ ಅಧಿಕಾರ ಭಕ್ತರಿಗಿದೆ. ಮಠದ ಪ್ರತಿಯೊಂದು ವಿಷಯದಲ್ಲಿ ಸ್ವಾಮೀಜಿಯವರ ಕುಟುಂಬದವರ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಆರೋಪಿಸಿದರು.
ಮಠದ ಆಸ್ತಿ ವಿಷಯದಲ್ಲಿ ಸ್ವಾಮೀಜಿಯವರು ಭಕ್ತರ ಹಕ್ಕೋತ್ತಾಯಕ್ಕೆ ಮನ್ನಣೆ ನೀಡಬೇಕು. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಬೇಕಾಗುತ್ತದೆ. ಸ್ವಾಮೀಜಿ ಹಾಗೂ ಸಹೋದರರಿಂದ ಮಠದ ಭಕ್ತರಿಗೆ ಆಗುವ ಅನ್ಯಾಯ ಖಂಡಿಸಲು ಒಗ್ಗಟ್ಟು ಪ್ರದರ್ಶನ ಮಾಡಬೇಕಾಗುತ್ತದೆ ಎಂದರು.ಮುಖಂಡ ದಾನನಗೌಡ ತೊಂಡಿಹಾಳ ಮಾತನಾಡಿ, ನಾವು ಸ್ವಾಮೀಜಿಯ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧರಾಗಿದ್ದೇವೆ. ಭಕ್ತರ ಅಪೇಕ್ಷೆಯಂತೆ ಸ್ವಾಮೀಜಿ ನಡೆದುಕೊಳ್ಳಲಿ.ಮಠದಿಂದ ನಡೆಯುತ್ತಿರುವ ಅನುದಾನಿತ ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ವಿದ್ಯಾರ್ಥಿ ಪಾಲಕರಿಂದ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದರು.
ಮಠದ ಪರಂಪರೆ ಹಾಗೂ ಆಸ್ತಿ ಉಳಿಯಬೇಕಾದರೇ ಟ್ರಸ್ಟ್ ರಚನೆ ಮಾಡಬೇಕು ಎಂಬ ಒತ್ತಾಯ ಸಮಾವೇಶದಲ್ಲಿ ಕೇಳಿಬಂದವು.
ಪ್ರಮುಖರಾದ ಸುರೇಶಗೌಡ ಶಿವನಗೌಡರ, ಶಂಕ್ರಪ್ಪ ಗಾಂಜಿ, ಸುರೇಶ ನಡುವಲಮನಿ, ಅಕ್ಕಮಹಾದೇವಿ ಬನ್ನಪ್ಪಗೌಡರ, ಸುಭಾಷ ಹೊಂಬಳ ಮಾತನಾಡಿದರು.