ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಕೆನೋಪಿ ವಾಕ್ ನಿರ್ಮಾಣಕ್ಕೆ ಚಿಂತನೆ

KannadaprabhaNewsNetwork |  
Published : Apr 19, 2026, 02:30 AM IST
ಡಾ. ಸಂತೋಷ್ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಗರದಲ್ಲಿರುವ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಕೆನೋಪಿ ವಾಕ್ ನಿರ್ಮಾಣಕ್ಕೆ ಚಿಂತನೆ ಮತ್ತು ದಂಡಾಕರಣ್ಯ ಇಕೋ ಪಾರ್ಕಿನ್ನು ಇನ್ನಷ್ಟು ವೈಭವದ ಜೊತೆಗೆ ಹೊಸಹೊಸ ಕಾಯಕಲ್ಪವನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ನಗರದಲ್ಲಿರುವ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಕೆನೋಪಿ ವಾಕ್ ನಿರ್ಮಾಣಕ್ಕೆ ಚಿಂತನೆ ಮತ್ತು ದಂಡಾಕರಣ್ಯ ಇಕೋ ಪಾರ್ಕಿನ್ನು ಇನ್ನಷ್ಟು ವೈಭವದ ಜೊತೆಗೆ ಹೊಸಹೊಸ ಕಾಯಕಲ್ಪವನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್ ಕೆ.ಸಿ. ಹೇಳಿದರು.

ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಇಕೋ ಪಾರ್ಕ್ ಉದ್ಯಾನವನದ ಪ್ರಗತಿ ಮತ್ತು ನಗರವನ ಯೋಜನೆಯ ಅಡಿಯಲ್ಲಿ ಮುಂದೆ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ದಂಡಕಾರಣ್ಯ ಇಕೋ ಪಾರ್ಕ್ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ನಗರವನ ಯೋಜನೆಯು ಮಂಜೂರಾಗಿದ್ದು. ಈ ಯೋಜನೆಯಡಿ ಉದ್ಯಾನವನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅತೀ ಎತ್ತರದ ಗೋಪುರ ನಿರ್ಮಾಣ ಕಾರ್ಯವು ನಡೆಯಲಿದೆ. ಅದರಲ್ಲೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗಣಿತ ಹಾಗೂ ವಿಜ್ಞಾನ ಪ್ರಯೋಗಾಲಯ ವಿನೂತನ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಆಕರ್ಷಕ ಸಲಕರಣೆ ಜೋಡಿಸಲಾಗುತ್ತದೆ. ವಾಕಿಂಗ್ ಪಾಥ್ ಮತ್ತು ಸೈಕಲ್ ಸಂಚಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿರುವ ಯಾವುದೇ ಮರ-ಗಿಡಗಳಿಗೆ ಹಾನಿಯಾಗದೆ ಅವುಗಳ ಸಂರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ವಿವಿಧ ಕಾರ್ಯ ನಡೆಯಲಿವೆ. ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಇಡೀ ದಿನ ಇಲ್ಲಿ ಇದ್ದು ಇಲ್ಲಿಯ ಮನೋರಂಜನೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಉದ್ಯಾನವನ ಸಮಿತಿಯ ಸರ್ವ ಸದಸ್ಯರು ಹಾಗೂ ನಗರದ ಜನತೆಯ ಸಹಕಾರದಲ್ಲಿ ದಂಡಕಾರಣ್ಯ ಇಕೋ ಪಾರ್ಕನ್ನು ವಿಶಿಷ್ಟ ಪಾರ್ಕಾಗಿ ರೂಪುಗೊಳಿಸಲು ಸಿದ್ಧತೆ ನಡೆಸಲಾಗಿದ್ದು, ಇಲ್ಲಿ ಕೆನೋಪಿ ವಾಕ್ ನಿರ್ಮಾಣಕ್ಕೆ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಲಾಗಿದೆ. ಕೆನೋಪಿ ವಾಕ್ ನಿರ್ಮಾಣಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಗೂ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ ಚವ್ಹಾಣ ಕೇಂದ್ರ ಸರಕಾರದ ನಗರವನ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ವಲಯಾರಣ್ಯಾಧಿಕಾರಿ ಎನ್.ಎಲ್. ನದಾಫ್ ಉಪಸ್ಥಿತರಿದ್ದರು. ಸಭೆಯಲ್ಲಿ ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯ್ಕ ದಂಡಕಾರಣ್ಯ ಇಕೋ ಪಾರ್ಕಿನ ಪ್ರಗತಿ ವರದಿ, ಜಮಾ ಖರ್ಚಿನ ವರದಿ ಮಂಡಿಸಿದರು. ಗಜಾನನ ಕರಗಾಂವಕರ ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ಮೋಹನ ಹಲವಾಯಿ, ಕೀರ್ತಿ ಗಾಂವಕರ, ಅನಿಲ್ ದಂಡಗಲ್, ಸಂದೇಶ್ ಎಸ್.ಜೈನ್, ಆಹಾರ ನಿರೀಕ್ಷಕ ಗೋಪಿ ಚವ್ಹಾಣ, ಅರಣ್ಯ ಇಲಾಖೆ ಹಾಗೂ ಇಕೋ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿಗೊಂಡು ವರ್ಗಾವಣೆ ಆಗುತ್ತಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್ ಚವ್ಹಾಣ ಅವರನ್ನು ದಂಡಕಾರಣ್ಯ ಇಕೋ ಪಾರ್ಕ್ ಸಿಬ್ಬಂದಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿಯಲ್ಲಿ ಮಧ್ಯರಾತ್ರಿ ದಾಳಿಂಬೆ ಕಳ್ಳತನ
ಕನಕಗಿರಿ ಜನತೆಯಲ್ಲಿ 5ನೇ ಉತ್ಸವದ ಸಂಭ್ರಮ