ಮಹಾಮಳೆಗೂ ಮುನ್ನ ನಮಗೊಂದು ಸೂರು ಕೋಡಿ ಪ್ಲೀಸ್!

KannadaprabhaNewsNetwork |  
Published : May 25, 2024, 12:51 AM ISTUpdated : May 25, 2024, 12:52 AM IST
ಥಿಲಾವಸ್ಥೆಯಲ್ಲಿರುವ ರಾಘವನ್ ಪಿಳ್ಳೈ ಸುಶೀಲ ವೃದ್ದ ದಂಪತಿ ಮನೆಯ ಚಿತ್ರಣ | Kannada Prabha

ಸಾರಾಂಶ

ನಗರದ ಅಪಾಯಕಾರಿ ಸ್ಥಳಗಳ ಪೈಕಿ ಮಂಗಳಾದೇವಿ ನಗರವೂ ಒಂದು. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಆತಂಕದಿಂದಲೇ ಬದುಕು ಸಾಗಿಸುತ್ತಾರೆ. 2018ರಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಈ ಮಂಗಳಾದೇವಿ ನಗರದ ನಿವಾಸಿಗಳು ಕೂಡ ಸಂತ್ರಸ್ತರು.

ಮೋಹನ್ ರಾಜ್

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೋಡೆ ಕುಸಿದು ಇಂದೋ ನಾಳೆಯೋ ಧರೆಗುರುಳುವ ಸ್ಥಿತಿಯಲ್ಲಿರುವ ಶಿಥಿಲಗೊಂಡಿರುವ ಮನೆಯಲ್ಲೇ ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ಮಂಗಳಾದೇವಿ ನಗರದ ವಯೋವೃದ್ಧ ದಂಪತಿ ಬದುಕುತ್ತಿದ್ದು, ಮಹಾಮಳೆಗೂ ಮುನ್ನ ನಮಗೊಂದು ಮನೆ ಮಾಡಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.ಒಂದೇ ಕೊಠಡಿಯಲ್ಲಿ ಗೃಹ ಬಳಕೆ ವಸ್ತುಗಳ ಸಹಿತ ಬದುಕು ದೂಡುತ್ತಿದ್ದಾರೆ ಮಂಗಳಾದೇವಿ ನಗರದ ರಾಘವನ್ ಪಿಳ್ಳೈ, ಸುಶೀಲಾ ದಂಪತಿ.

* ಅಪಾಯಕಾರಿ ಪ್ರದೇಶನಗರದ ಅಪಾಯಕಾರಿ ಸ್ಥಳಗಳ ಪೈಕಿ ಮಂಗಳಾದೇವಿ ನಗರವೂ ಒಂದು. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಆತಂಕದಿಂದಲೇ ಬದುಕು ಸಾಗಿಸುತ್ತಾರೆ. 2018ರಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಈ ಮಂಗಳಾದೇವಿ ನಗರದ ನಿವಾಸಿಗಳು ಕೂಡ ಸಂತ್ರಸ್ತರು. ಪ್ರಾಕೃತಿಕ ವಿಕೋಪದ ಕಾರಣಗಳನ್ನು ಅಧ್ಯಯನ ನಡೆಸಿದ್ದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಕೂಡ ಮಂಗಳದೇವಿ ನಗರ ಸುರಕ್ಷಿತ ಅಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಹೀಗಿದ್ದರೂ ಜಿಲ್ಲಾಡಳಿತವಾಗಲಿ, ಸ್ಥಳೀಯ ನಗರ ಸಭೆಯಾಗಲಿ ಇದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

* ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲತೀರಾ ಇಳಿಜಾರಿಗಿರುವ ಬೆಟ್ಟದ ಸಾಲಿನಲ್ಲಿ ಈ ಜನ ವಸತಿ ಪ್ರದೇಶವಿದ್ದು, ಇದೇ ಸಾಲಿನಲ್ಲಿ ರಾಘವನ್ ಪಿಳ್ಳೈ ಮತ್ತು ಸುಶೀಲಾ ದಂಪತಿಯ ಮನೆ ಕೂಡ ಇದೆ. 2018ರಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಇವರ ಮನೆಗೂ ತೀರಾ ಹಾನಿಯಾಗಿತ್ತು. ಆ ಬಳಿಕ ಮಡಿಕೇರಿ ನಗರಸಭೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದ ವೃದ್ಧ ದಂಪತಿ, ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ನಿರ್ಮಿಸುತ್ತಿರುವ ಮನೆಗಳ ಪೈಕಿ ತಮಗೂ ಒಂದನ್ನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆಯಿಂದ ಮತ್ತು ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ಈ ಬಡ ಕುಟುಂಬಕ್ಕೆ ಮನೆ ಮಂಜೂರಾಗಿಲ್ಲ.* ಮನೆ ಸಂಪೂರ್ಣ ಶಿಥಿಲ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಹಿಂದೆಯೇ ಶಿಥಿಲವಾಗಿದ್ದ ಮನೆ ಇದೀಗ ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ. ಗೋಡೆಗಳ ಸಹಿತ ನೆಲದಲ್ಲೂ ಬಿರುಕು ಬಿಟ್ಟಿವೆ. ಮನೆಯ ಹಿಂಬದಿಯ ಬರೆ ಕುಸಿದು ಮರ ಸಹಿತ ಮನೆಯ ಗೋಡೆಯ ಮೇಲೆ ಬಿದ್ದಿದ್ದು, ಇಟ್ಟಿಗೆಗಳು ಕುಸಿದಿದೆ. ಮಳೆ ನೀರು ಮನೆ ಒಳಗೆ ಸೇರುತ್ತಿದೆ. ಮನೆಯ ಸದ್ಯದ ಪರಿಸ್ಥಿತಿ ನೋಡಿದರೆ, ಈ ಮಳೆಗಾಲದಲ್ಲಿ ಮನೆ ಉಳಿಯುವುದೇ ಸಂಶಯ ಎಂದೆನಿಸಿದೆ. ಇದೇ ಆತಂಕ ವಯೋವೃದ್ಧ ದಂಪತಿಯನ್ನೂ ಕಾಡುತ್ತಿದ್ದು, ಜೀವ ಉಳಿಸಿಕೊಳ್ಳಲು ಸೂರು ನೀಡಿ ಎಂದು ಬಡ ಜೀವಗಳು ಅಂಗಲಾಚುವಂತಾಗಿದೆ.

* ಬಾಡಿಗೆ ಮನೆ ಕಷ್ಟಮಳೆಗಾಲದ ಸಂದರ್ಭ ಈ ಮನೆಯಲ್ಲಿ ಉಳಿಯುವುದು ಅಸಾಧ್ಯ. ಈ ಕಾರಣದಿಂದ ಬಾಡಿಗೆ ಮನೆ ಹುಡುಕುವ ಸಂದರ್ಭ 25 ಸಾವಿರ ರು. ಮುಂಗಡ ಸಹಿತ ತಿಂಗಳಿಗೆ 5 ಸಾವಿರ ರು. ಬಾಡಿಗೆ ನೀಡುವಂತೆ ಮನೆಗಳ ಮಾಲೀಕರು ಕೇಳುತ್ತಾರೆ. ಕೂಲಿ ಮಾಡಿ ಬದುಕುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಇಷ್ಟು ಹಣವನ್ನು ಪಾವತಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಈ ನಿರಾಶ್ರಿತ ಕುಟುಂಬ, ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳ ಪೈಕಿ ಒಂದು ಮನೆಯನ್ನು ನಮ್ಮಂಥ ಬಡ ಕುಟುಂಬಕ್ಕೆ ಆಡಳಿತ ವ್ಯವಸ್ಥೆ ನೀಡುವಂತೆ ಮನವಿ ಮಾಡಿದ್ದಾರೆ.

-------ಇದ್ದ ಒಂದು ಮನೆಯೂ ಕಳೆದ ಪ್ರಾಕೃತಿಕ ವಿಕೋಪ ಸಂದರ್ಭ ಹಾನಿಗೀಡಾಗಿ ಇನ್ನೇನೂ ನೆಲಸಮವಾಗುವ ಹಂತಕ್ಕೆ ತಲುಪಿದೆ. ಈ ಕುರಿತು ನಾವು ಜಿಲ್ಲಾಡಳಿತ ಗಮನಕ್ಕೂ ತಂದಿದ್ದು, ಸುರಕ್ಷಿತ ಪ್ರದೇಶದಲ್ಲಿ ಸೂರು ನೀಡುವಂತೆ ಮನವಿ ಮಾಡಿದ್ದೆವು. ಆದರೆ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಮುಂದೇನು ಆಗುತ್ತೋ ಗೊತ್ತಿಲ್ಲ. ಈ ಮಳೆಗಾಲದಲ್ಲಿ ಮನೆ ಬೀಳೋದು ಗ್ಯಾರಂಟಿ. ನಮ್ಮ ಬದುಕು ಪ್ರಶ್ನಾರ್ಥಕವಾಗಿ ಉಳಿದಿದೆ. ಮುಂದೇನು ಮಾಡಬೇಕೆಂದು ತೋಚದಂತಾಗಿದೆ.। ರಾಘವನ್ ಪಿಳೈ, ಸುಶೀಲಾ ದಂಪತಿ

PREV

Recommended Stories

ಬುರುಡೆ ಬಗ್ಗೆ ದಿನಕ್ಕೊಂದು ಅಚ್ಚರಿಯ ವಿಚಾರಗಳು ಹೊರಗೆ : ಇಲ್ಲಿದೆ ಸಂಪೂರ್ಣ ಬುರುಡೆ ಪುರಾಣ
ಭೋವಿ ನಿಗಮದಲ್ಲಿ ಶೇ.60 ಕಮಿಷನ್‌: ವಿಡಿಯೋ ಬಿಡುಗಡೆಗೊಳಿಸಿ ಆರೋಪ