ನಮ್ಮ ಹೆಡ್ ಮಾಸ್ಟರ್‌ ವರ್ಗಾವಣೆ ಮಾಡಬೇಡಿ ಪ್ಲೀಸ್‌

KannadaprabhaNewsNetwork |  
Published : Nov 12, 2025, 01:30 AM IST
11 ಟಿವಿಕೆ 2 – ತುರುವೇಕೆರೆ ಪಟ್ಟಣದಲ್ಲಿರುವ ಪಿಎಂಶ್ರೀ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಈ ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಕುಮಾರ್ ರವರನ್ನು ವರ್ಗಾವಣೆ ಮಾಡಬಾರದೆಂದು ಆಗ್ರಹಿಸಿದರು. | Kannada Prabha

ಸಾರಾಂಶ

ದಯವಿಟ್ಟು ನಮ್ ಹೆಡ್ ಮಾಸ್ಟರ್ ನ ಬೇರೆ ಕಡೆಗೆ ಟ್ರಾನ್ಸ್ ಫರ್ ಮಾಡ್ಬೇಡಿ ಸಾರ್. ಅವರಿಂದಲೇ ನಾವು ಒಳ್ಳೆ ಆಟ ಪಾಠ ಕಲೀತಿದ್ದೀವಿ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ದಯವಿಟ್ಟು ನಮ್ ಹೆಡ್ ಮಾಸ್ಟರ್ ನ ಬೇರೆ ಕಡೆಗೆ ಟ್ರಾನ್ಸ್ ಫರ್ ಮಾಡ್ಬೇಡಿ ಸಾರ್. ಅವರಿಂದಲೇ ನಾವು ಒಳ್ಳೆ ಆಟ ಪಾಠ ಕಲೀತಿದ್ದೀವಿ. ಅವರೇನಾದ್ರೂ ಈ ಶಾಲೆಯಿಂದ ಬೇರೆ ಕಡೆ ಹೋದ್ರೆ ನಮ್ ಗತಿ ಏನಾಗುತ್ತೋ ಗೊತ್ತಿಲ್ಲ ಸಾರ್ ... ಹೀಗೆ ಅಂಗಲಾಚುತ್ತಿರುವುದು ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲಿಯ ಪ್ರಧಾನ ಮಂತ್ರಿ ಶ್ರೀ ಸರ್ಕಾರಿ ಮಾದರಿ ಬಾಲಕರ ಹಿರಿಯ ಪಾಠಶಾಲೆ ಜಿಲ್ಲೆಯಲ್ಲೇ ಹೆಸರು ವಾಸಿಯಾಗಿದ್ದು , ಈ ಶಾಲೆಯಲ್ಲಿ ಸದ್ಯ 750 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 32 ಮಂದಿ ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಈ ಶಾಲೆ ಖಾಸಗಿ ಶಾಲೆಗೆ ಸೆಡ್ಡು ಹೊಡೆದು ನಿಂತಿದೆ. ಇದಕ್ಕೆಲ್ಲ ಕಾರಣ ಮುಖ್ಯ ಶಿಕ್ಷಕ ಸತೀಶ್ ಕುಮಾರ್

ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಕುಮಾರ್ ಕೌನ್ಸಿಲಿಂಗ್ ನಲ್ಲಿ ಇಲ್ಲಿಂದ ಬೇರೆಡೆಗೆ ವರ್ಗ ಮಾಡಿಸಿಕೊಂಡಿದ್ದಾರೆ. ಇದು ಬಹಿರಂಗವಾಗಿದ್ದು ಇದರಿಂದ ಆಘಾತಗೊಳಗಾಗಿರುವ ಮಕ್ಕಳು, ಪೋಷಕರು ಮತ್ತು ಶಿಕ್ಷಕರು, ವರ್ಗಾವಣೆಯನ್ನು ರದ್ದು ಮಾಡಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ತರಗತಿಯಿಂದ ಹೊರಬಂದ ಮಕ್ಕಳು ಈ ಶಾಲೆಯನ್ನು ಬಿಟ್ಟು ಹೋಗಬೇಡಿ ಎಂದು ಸತೀಶ್ ಕುಮಾರ್ ರವರ ಮುಂದೆ ಅಳುತ್ತಿದ್ದಾರೆ. ಈ ಮುಖ್ಯ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಬಾರದೆಂದು ಶಾಸಕ ಎಂ.ಟಿ.ಕೃಷ್ಣಪ್ಪ, ಬಿಇಒ ಸೋಮಶೇಖರ್ ರವರ ಬಳಿಯೂ ಮನವಿ ಮಾಡಿಕೊಂಡಿದ್ದಾರೆ.

ಈ ಶಾಲೆಯ ಸರ್ವತೋಮುಖ ಅಭವೃದ್ಧಿಗೆ ಕಾರಣೀಭೂತರಾಗಿರುವ ಸತೀಶ್ ಕುಮಾರ್ ರವರು ಓಸಾಟ್ ಎಂಬ ಕಂಪನಿಯೊಂದಿಗೆ ವ್ಯವಹರಿಸಿ ಸುಮಾರು 2.5 ಕೋಟಿ ವೆಚ್ಚದಲ್ಲಿ ಸುಮಾರು 13 ಕೊಠಡಿಗಳು, ಆಡಿಟೋರಿಯಂ, ಹೈ ಟೆಕ್ ಲೈಬ್ರರಿ, ಕಂಪ್ಯೂಟರ್ ಲೈಬ್ರರಿ ಸೇರಿದಂತೆ ಇನ್ನಿತರ ಆಧುನಿಕ ಸೌಲಭ್ಯಗಳನ್ನು ತರಲು ಶ್ರಮಿಸಿದ್ದಾರೆ. ಈ ಕಾಮಗಾರಿಗೆ ಇನ್ನು ಕೆಲವೇ ದಿನಗಳಲ್ಲಿ ಭೂಮಿಪೂಜೆ ನಡೆಯಲಿದೆ. ಈ ಹೊತ್ತಿನಲ್ಲಿ ಸತೀಶ್ ಕುಮಾರ್ ರವರು ಇಲ್ಲಿಂದ ಬೇರೆಡೆಗೆ ವರ್ಗಾವಣೆಗೊಂಡರೆ ತುಂಬಾ ಅನ್ಯಾಯವಾಗಲಿದೆ ಎಂದು ಈ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ. ಈ ಕೂಡಲೇ ಸತೀಶ್ ಕುಮಾರ್ ರವರ ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕೆಂದೂ ಸಹ ಅವರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ