ಹೊಸಪೇಟೆ: ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಇರುವ ನಾರಿಶಕ್ತಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ಯೋಜನೆಗಳನ್ನು ನೀಡಿ ಅವರನ್ನು ರಾಷ್ಟ್ರೀಯ ಶಕ್ತಿಯನ್ನಾಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಮೋದಿಗೆ ನಾರಿಶಕ್ತಿಯೇ ಪರಿವಾರ ಆಗಿದೆ ಎಂದು ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜುಳಾ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆ ಗಳಿಂದ ಇಂದು ದೇಶದ ಕೋಟ್ಯಂತರ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಯೋಜನೆಗಳನ್ನು ಜಾರಿ ಮಾಡಿ ವಿಶ್ವ ಖ್ಯಾತಿ ಹೊಂದಿರುವ ನರೇಂದ್ರ ಮೋದಿ ಮತ್ತೆ ಪ್ರಧಾನಿ ಮಾಡಬೇಕಿದೆ ಎಂದರು.
65 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್, ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಯೋಚಿಸಿರಲಿಲ್ಲ. ಪ್ರಧಾನಿ ಮೋದಿಯವರು ನಾರಿ ಶಕ್ತಿ ವಂದನಾ ಕಾಯ್ದೆ-2023 ಜಾರಿ ಮಾಡಿದ್ದರಿಂದ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ. 33 ಮೀಸಲಾತಿ ಸೌಲಭ್ಯ ಸಿಕ್ಕಿದೆ. ಸ್ಥಳೀಯ ಸಂಸ್ಥೆ ಗಳಿಗೆ ಶೇ.50ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಎಲ್ಲ ರಂಗದಲ್ಲಿಯೂ ಮಹಿಳೆಯರು ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದಲೂ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರನ್ನು ಗೆಲ್ಲಿಸಬೇಕು ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಮಾರ್ಗದಲ್ಲಿ ಹೋಗದೆ ಅನ್ಯ ಮಾರ್ಗದಲ್ಲಿ ಹೋಗಿ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಹಿಡಿದಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಹಾಕಿದರೆ ಮಾತ್ರ ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ ಎಂದು ಆ ಪಕ್ಷದ ಶಾಸಕರೇ ಮಾತನಾಡಿದ್ದಾರೆ. ಇದು ಬ್ಲಾಕ್‌ಮೇಲ್ ತಂತ್ರವಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಶೌಚಾಲಯ ನಿರ್ಮಾಣದಿಂದ ಹಿಡಿದು ಸ್ವ-ಉದ್ಯೋಗದವರೆಗೂ ಮಹಿಳೆಯರಿಗಾಗಿ 300ಕ್ಕೂ ಯೋಜನೆ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಜನಧನ್ ಯೋಜನೆ ಮೂಲಕ ಮಹಿಳೆಯರಿಗೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಲು ಅವಕಾಶ ಮಾಡಿದ್ದಾರೆ. ಮೋದಿ ಅವರ ಸಾಧನೆಗೆ ಸರಿಸಾಟಿಯಾಗಿ ಕಾಂಗ್ರೆಸ್ ನಿಲ್ಲುವುದಿಲ್ಲ. ರಾಜ್ಯದಲ್ಲೂ ಈ ಬಾರಿಯೂ ಬಿಜೆಪಿ ಹಾಗೂ ಜೆಡಿಎಸ್‌ನ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ. ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ಲಭಿಸಲಿದೆ ಎಂದರು.
ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಯೋಜನೆಗಳ ಬಗ್ಗೆ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಗರಸಭೆ ಅಧ್ಯಕ್ಷೆ ಲತಾ, ಮುಖಂಡರಾದ ದೀನಾ ಮಂಜುನಾಥ, ಭಾರತಿ ಪಾಟೀಲ್, ಕೆ.ಎಸ್. ರಾಘವೇಂದ್ರ, ಅಶೋಕ್ ಜೀರೆ, ಶರಣಮ್ಮ, ಸುಗುಣ, ಪ್ರಿಯಾಂಕಾ ಜೈನ್, ಕವಿತಾ, ಶಾರದಾ ಕುಂಬಾರ, ಲಕ್ಷ್ಮೀಬಾಯಿ ಸೇರಿದಂತೆ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಇದ್ದರು.