ಮಡಿಕೇರಿ : ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ದೇಶದ ಪ್ರಧಾನಿಯಾಗಿ 12 ವರ್ಷಗಳ ಕಾಲ ಕಳಂಕರಹಿತ ಸುದೀರ್ಘ ಸೇವೆ ಸಲ್ಲಿಸಿರುವ ಮೋದಿ, ಸ್ವಾಮಿ ವಿವೇಕಾನಂದರು ಕಂಡ ಬಲಿಷ್ಠ, ಸಮರ್ಥ ಹಾಗೂ ಭವ್ಯ ಭಾರತದ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಭಾರತ ಮಾತ್ರ ಬದಲಾಗುತ್ತಿಲ್ಲ. ಜಗತ್ತು ಕೂಡ ಬದಲಾಗುತ್ತಿದೆ. ಇಂದು ಇಡೀ ಪ್ರಪಂಚದಲ್ಲೇ ಯುದ್ಧದ ಭೀತಿ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ, ವಿಶ್ವದ ನಾಯಕರ ಪೈಕಿ ಒಂದೇ ಒಂದು ದೂರವಾಣಿ ಕರೆಯಲ್ಲಿ ಯುದ್ಧವನ್ನು ನಿಯಂತ್ರಣಕ್ಕೆ ತರಬಲ್ಲ ಹಾಗೂ ನಿಲ್ಲಿಸಬಲ್ಲ ಏಕೈಕ ಸಾಮರ್ಥ್ಯ ಮತ್ತು ಶಕ್ತಿ ಇದ್ದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದು ವಿದೇಶಿ ನಾಯಕರೇ ಹೇಳಿದ್ದಾರೆ.2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವನ್ನಾಗಿ ನಿರ್ಮಿಸುವ ಪ್ರಧಾನಿಯವರ ಸಂಕಲ್ಪಕ್ಕೆ ಪ್ರತಿಯೊಬ್ಬ ದೇಶವಾಸಿಯೂ ಕೈಜೋಡಿಸಬೇಕಿದೆ. ಇದು ಯಾವುದೇ ವ್ಯಕ್ತಿ ಪೂಜೆಯಲ್ಲ, ಬದಲಾಗಿ ಭಾರತವನ್ನು ಜಗದ್ವಂದ್ಯ ರಾಷ್ಟ್ರವನ್ನಾಗಿ ರೂಪಿಸುವ ರಾಷ್ಟ್ರ ಪೂಜೆ ಹಾಗೂ ಸಂಕಲ್ಪ ಯಾತ್ರೆ ಆಗಿದೆ ಎಂದು ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರದ ದ್ವೇಷದ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದರು. ಬಿಜೆಪಿ ಕಾರ್ಯಕರ್ತರು, ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಶಾಸಕರ ಮೇಲೆಯೂ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರು ನಾಪಂಡ ರವಿ ಕಾಳಪ್ಪ ಮಾತನಾಡಿ, 2047ಕ್ಕೆ ವಿಕಸಿತ ಭಾರತ ನಿರ್ಮಿಸುವುದು ಮೋದಿ ಅವರ ಕನಸಾಗಿದೆ. ತಮ್ಮ 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ರಹಿತವಾಗಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಅವರು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ಸಾರ್ವಜನಿಕರು ಜಾಗೃತರಾಗಬೇಕು ಎಂದು ಹೇಳಿದರು. ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಪ್ರಧಾನಿ ಮೋದಿ ದೇಶಕ್ಕೆ ಯಾವುದೇ ಕಳಂಕವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. 13 ವರ್ಷ ಗುಜರಾತ್ ಸಿಎಂ ಆಗಿ ಹಾಗೂ 12 ವರ್ಷಗಳಿಂದ ಪ್ರಧಾನಿಯಾಗಿ ನೀಡಿದ ಆಡಳಿತದಿಂದ ಇಂದು ಭಾರತ ಅಭಿವೃದ್ಧಿಯಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿ.ಎನ್. ಲೋಕೇಶ್, ಚಲನ್ ಕುಮಾರ್, ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.