ಧನಪಾಲ ನಾಗರಾಜಪ್ಪ ಅವರು ಅನುವಾದಿತ ಕೃತಿಗಳಾದ ಮಾತಾಡುವ ದೇವರು ಮತ್ತು ಅವಳಿಗೆ ಹೇಳಿ ಕೃತಿಗಳ ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತುಮಕೂರು
ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ ಎಂದು ಸಾಹಿತಿ ರಂಗಮ್ಮ ಹೊದೇಕಲ್ ಅಭಿಪ್ರಾಯಪಟ್ಟರು. ನಗರದ ಎಸ್.ಎಸ್. ಪುರಂನ ಅಂಗಳ ಕಮ್ಯುನಿಟಿ ಟ್ರಸ್ಟ್ ನಲ್ಲಿ ದಾರಿಬುತ್ತಿ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಧನಪಾಲ ನಾಗರಾಜಪ್ಪ ಅವರು ಅನುವಾದಿತ ಕೃತಿಗಳಾದ ಮಾತಾಡುವ ದೇವರು ಮತ್ತು ಅವಳಿಗೆ ಹೇಳಿ ಕೃತಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಃಖಗಳಿಂದ ಮಾತ್ರವೇ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನಮ್ಮೊಳಗಿನ ಸೃಜನಶೀಲತೆಯನ್ನು ಉದ್ದೀಪಿಸಲು, ಮತ್ತೊಬ್ಬರ ನೋವಿಗೆ ಮಿಡಿಯುವಂತೆ ನಮ್ಮನ್ನು ಅಣಿಗೊಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕಿ ಕೆ.ವಿ. ವಿವೇಕ, ಮಾತಾಡುವ ದೇವರು ಕೃತಿಯನ್ನು ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಕನ್ನಡದ ಪ್ರಾದೇಶಿಕತೆಗೆ ಹೊಂದಿಸಿ ಅನುವಾದಿಸಲಾಗಿದೆ. ಈ ಕೃತಿ, ಕನ್ನಡದ್ದೇ ನಮ್ಮದೇ ಬದುಕಿನ ಕಥೆ ಎಂತೆ ಮೂಡಿಬಂದಿದೆ ಎಂದರು.
ಅವಳಿಗೆ ಹೇಳಿ ಕೃತಿ ಕುರಿತು ಮಾತನಾಡಿದ ದರ್ಶನ್ ಎಸ್.ಆರ್. ಇವರು, ಸುತ್ತಲೂ ಕತ್ತಲೆ ಆವರಿಸಿರುವಾಗ, ಕವಿತೆ ಒಂದು ಬೆಳಕು. ನಮ್ಮ ಸುತ್ತ ಇರುವ ಶೋಷಣೆ, ದೌರ್ಜನ್ಯ, ಅಸಮಾನತೆಗಳೇ ಈ ಕತ್ತಲೆ. ಅದೇ ಬೆಳಕು. ಮೌನಕ್ಕೆ ಹೊಸ ಭಾಷ್ಯವನ್ನು ಈ ಕವಿತೆಗಳು ಕಟ್ಟಿ ಕೊಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್. ಕಲಾಧರ್, ಧನಪಾಲ್ ನಾಗರಾಜಪ್ಪ, ಮೇಘನ ಸಿ ಎಸ್., ದಾದಾಪೀರ್ ಬಿ. ಕೆ., ಅನೀಸ., ರಜಿನಿ, ರಂಜಿತ ಎಂ.ಎನ್, ಮಾನಸ ಎ.ಪಿ., ನವೀನ್ ಕುಮಾರ್ ಪಿ.ಆರ್., ಧನುಷ್ ಎಚ್ ಶೇಖರ್., ಪಾತಲಿಂಗಯ್ಯ ಡಿ.ಪಿ., ಹರಿಕೃಷ್ಣ ಕೆ.ಎಸ್., ಮಾರುತಿ ಟಿ., ಜ್ಞಾನೇಶ್ ಕೆ., ಸೇರಿದಂತೆ ಜಿಲ್ಲೆಯ ಕವಿಗಳು, ದಾರಿಬುತ್ತಿ ಹಾಗೂ ಅಂಗಳ ಟ್ರಸ್ಟ್ ನ ಸದಸ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.