ಲಾಕ್ಸಿ, ಲೋಹಿತ್ ರಸಾಯನಿಕ ಕೈಗಾರಿಕೆ ಮುಚ್ಚಲು ಡಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ; ಸಹಾಯಕ ಆಯುಕ್ತ ಪಿ. ಪ್ರಮೋದ್ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಕಾಟನ್ ಅಸೋಸಿಯೇಷನ್ ಮತ್ತು ಮುಂಡ್ರಗಿ ನಿವಾಸಿಗಳು ಕೈಗಾರಿಕಾ ಘಟಕಗಳ ಮುಂದೆ ನಡೆದ ಪ್ರತಿಭಟನೆ ಹಿನ್ನೆಲೆ ಕೈಗಾರಿಕೆಗಳು ಹೊರ ಸೂಸುತ್ತಿರುವ ವಿಷಾನಿಲದ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಗೆಲಾಕ್ಸಿ ಮತ್ತು ಲೋಹಿತ್ ಕೆಮಿಕಲ್ಸ್ ಕೈಗಾರಿಕೆಗಳು ವಿಷಾನಿಲವನ್ನು ಹೊರ ಸೂಸುತ್ತಿರುವುದರ ವಿರುದ್ಧ ಮುಂಡ್ರಗಿ ನಿವಾಸಿಗಳು, ಕಾಟನ್ ಮತ್ತು ಕೋಲ್ಡ್ ಸ್ಟೋರೇಜ್‌ನವರು ನಮ್ಮ ಸಂಸ್ಥೆಗೆ ದೂರು ನೀಡಿದ್ದರು. ಈ ಕೈಗಾರಿಕೆಗಳ ಜೊತೆ ವಿವಿಧ ಸುತ್ತಿನ ಸಭೆ ನಡೆಸಿ, ಸಾಕಷ್ಟು ಕಾಲಾವಕಾಶ ನೀಡಿದ್ದರೂ ಕೈಗಾರಿಕೆಗಳ ಆಡಳಿತ ಮಂಡಳಿಯು ವಿಷಾನಿಲವನ್ನು ತಡೆಯಲು ಉದ್ದೇಶಪೂರ್ವಕವಾಗಿ ಅಗತ್ಯ ಕ್ರಮಕೈಗೊಂಡಿಲ್ಲ. ಕಾರಣ ಅನಿವಾರ್ಯವಾಗಿ ಕೈಗಾರಿಕೆ ಮುಚ್ಚಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.ಈ ಕೈಗಾರಿಕೆಗಳ ವಿಷಾನಿಲವು ಸುತ್ತಲಿನ ಕಾಟನ್ ಮಿಲ್, ಕೋಲ್ಡ್ ಸ್ಟೋರೇಜ್, ರೈಸ್‌ಮಿಲ್‌ಗಳಿಗೆ ಹರಡಿ ಗೋಡಾನುಗಳಲ್ಲಿ ದಾಸ್ತಾನಿಗಿರುವ ಆಹಾರ ಪದಾರ್ಥಗಳಲ್ಲಿ ಸೇರುತ್ತಿದೆ. ಕೈಗಾರಿಕೆಗಳ ಮತ್ತು ಗೋದಾಮುಗಳ ಕಾರ್ಮಿಕರ ಹಾಗೂ ಮುಂಡ್ರಗಿ ನಿವಾಸಿಗಳು ವಿಷಾನಿಲದಿಂದಾಗಿ ವಾಂತಿ, ತಲೆ ಸುತ್ತು, ಶ್ವಾಸಕೋಶ, ಚರ್ಮ, ಹೃದಯ–ಕಿಡ್ನಿಯ ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ. ಜನರ ಜೊತೆ ಜಾನವಾರುಗಳೂ ತೀವ್ರ ಅನಾರೋಗ್ಯ ತುತ್ತಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.