ಧಾರವಾಡ ಚಲೋ ಹೋರಾಟಕ್ಕೆ ಪೊಲೀಸರ ಬ್ರೇಕ್‌!

KannadaprabhaNewsNetwork |  
Published : Dec 02, 2025, 02:00 AM IST
45465 | Kannada Prabha

ಸಾರಾಂಶ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,76 ಲಕ್ಷ ಖಾಲಿ ಹುದ್ದೆ ಭರ್ತಿ ಹಾಗೂ ನೇಮಕಾತಿ ವಯೋಮಿತಿ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆ ಈಡೇರಿಸಬೇಕೆಂದು ಬೆಳಗಾವಿ ಚಳಿಗಾಲದ ಅಧಿವೇಶನದ ಪೂರ್ವದಲ್ಲಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಧಾರವಾಡ:

ಖಾಲಿ ಹುದ್ದೆ ಭರ್ತಿ, ವಯೋಮಿತಿ ಸಡಿಲಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿವಿಧ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಸೋಮವಾರ ಧಾರವಾಡ ಜನಸಾಮಾನ್ಯರ ವೇದಿಕೆ ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಚಲೋ ಹೆಸರಿನ ಬೃಹತ್‌ ಹೋರಾಟಕ್ಕೆ, ಹೋರಾಟದ ರೂಪುರೇಷೆ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುವ ಕಾರಣದಿಂದ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಲ್ಲದೇ ಸ್ಪರ್ಧಾತ್ಮಕ ಕೇಂದ್ರಗಳಿಗೆ ನೋಟೀಸ್‌ ನೀಡಿ, ಮುಖಂಡರ ಬಂಧಿಸಿದ್ದರಿಂದ ಹಾಗೂ ಸರ್ಪಗಾವಲು ಹಾಕಿದ್ದರಿಂದ ಶ್ರೀನಗರ ವೃತ್ತದಲ್ಲಿಯೇ ಹೋರಾಟ ಶಾಂತವಾಯಿತು.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,76 ಲಕ್ಷ ಖಾಲಿ ಹುದ್ದೆ ಭರ್ತಿ ಹಾಗೂ ನೇಮಕಾತಿ ವಯೋಮಿತಿ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆ ಈಡೇರಿಸಬೇಕೆಂದು ಬೆಳಗಾವಿ ಚಳಿಗಾಲದ ಅಧಿವೇಶನದ ಪೂರ್ವದಲ್ಲಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ ಪೊಲೀಸರ ಕ್ರಮ, ನಿರ್ಬಂಧ, ಬಂಧನಗಳಿಂದ ಕೇವಲ ಸುಮಾರು 300 ಜನರು ಮಾತ್ರ ಪಾಲ್ಗೊಂಡಿದ್ದು ಅವರನ್ನೂ ಬಂಧಿಸಲಾಯಿತು.

ಮುಖಂಡರ ಬಂಧನ:

ಈ ಮಧ್ಯೆಯೂ ಸೋಮವಾರ ಬೆಳಗ್ಗೆ 10ರಿಂದ ಹೋರಾಟಗಾರರು ಹಾಗೂ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ಜಮೆ ಆಗಿ, ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಈ ಮಧ್ಯೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಪರವಾನಗಿ ಇಲ್ಲದೇ ಹೋರಾಟ ಬೇಡ ಎಂದು ಪೊಲೀಸರು ಎಚ್ಚರಿಸಿದರೂ ಹೋರಾಟ ಶುರು ಮಾಡಬೇಕು ಎನ್ನುವಷ್ಟರಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರಾದ ಯಲ್ಲಪ್ಪ ಹೆಗಡೆ, ಸಿದ್ದಲಿಂಗ ಬಾಗೇವಾಡಿ ಸೇರಿದಂತೆ 35ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಬಂಧಿಸಲಾಯಿತು. ಎರಡು ಬಸ್‌ಗಳ ಮೂಲಕ ಹುಬ್ಬಳ್ಳಿಯ ಸಿಆರ್‌ ಮೈದಾನಕ್ಕೆ ಕರೆದೊಯ್ದು ಸಂಜೆ ವರೆಗೂ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ಬಂಧಿತ ಮುಖಂಡರು ಮಧ್ಯಾಹ್ನ ಊಟ ಮಾಡದೇ ಪೊಲೀಸರ ಕ್ರಮ ಖಂಡಿಸಿದರು.

ಪೊಲೀಸರ ಭಯಕ್ಕೆ ಬರದ ಯುವಕರು:

ಹೋರಾಟದ ಸಮಯದಲ್ಲಿ ಪ್ರಕರಣ ದಾಖಲಾದರೆ ಔದ್ಯೋಗಿಕ ಭವಿಷ್ಯಕ್ಕೂ ತೊಂದರೆ. ಆದ್ದರಿಂದ ತಮ್ಮ ಮುಖಂಡರ ಬಂಧನವನ್ನು ಕಣ್ಣಾರೆ ಕಂಡ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಸ್ಥಳದಿಂದ ಕಾಲ್ಕಿತ್ತರು. ಜತೆಗೆ ಬಂಧನದ ಸುದ್ದಿ ಕೇಳಿ ಸಾಕಷ್ಟು ಕೋಚಿಂಗ್‌ ಕೇಂದ್ರಗಳ ಅಭ್ಯರ್ಥಿಗಳು ಪ್ರಕರಣ ದಾಖಲಾದೀತು ಎನ್ನುವ ಭಯದಲ್ಲಿ ಪ್ರತಿಭಟನಾ ಸ್ಥಳಕ್ಕೂ ಬರಲಿಲ್ಲ. ಆದರೆ, ಈ ಪ್ರತಿಭಟನೆಗೆ ಸಹಕಾರ ನೀಡಿದ್ದ ಕಳಸಾ-ಬಂಡೂರಿ ಹೋರಾಟಗಾರ ಶಂಕರಪ್ಪ ಅಂಬಲಿ ಹಾಗೂ ಇತರೆ ರೈತ ಮುಖಂಡರು, ಹೋರಾಟಗಾರರ ಬಂಧನ ಖಂಡಿಸಿ ಹಾಗೂ ಹೋರಾಟಗಾರರ ಮನವಿ ಸ್ವೀಕರಿಸುವಂತೆ ಆಗ್ರಹಿಸಿ ಶ್ರೀನಗರ ವೃತ್ತದಲ್ಲಿಯೇ ಸಂಜೆ ವರೆಗೂ ಧರಣಿ ನಡೆಸಿದರು. ಕೊನೆಗೆ ಸಂಜೆ 4ರ ಹೊತ್ತಿಗೆ ಅಪರ ಜಿಲ್ಲಾಧಿಕಾರಿ ಶ್ರೀನಗರ ವೃತ್ತಕ್ಕೆ ಬಂದು ಉದ್ಯೋಗಾಕಾಂಕ್ಷಿಗಳ ಮನವಿ ಸ್ವೀಕರಿಸುವ ಮೂಲಕ ಪ್ರತಿಭಟನೆಗೆ ಅಂತ್ಯ ಹಾಡಲಾಯಿತು.

ಇದು ಅಂತ್ಯವಲ್ಲ:

ಸೋಮವಾರ ನಡೆಯಬೇಕಿದ್ದ ಉದ್ಯೋಗಾಕಾಂಕ್ಷಿಗಳ ಹೋರಾಟ ದಿಢೀರನೆ ನಡೆದ ವಿದ್ಯಮಾನವಲ್ಲ. ಕಳೆದ ನಾಲ್ಕೈದು ತಿಂಗಳಿಂದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಹಲವಾರು ಹೋರಾಟ ನಡೆದಿರುವುದು ಸರ್ಕಾರದ ಗಮನಕ್ಕಿದೆ. ರಾಜ್ಯ, ಕೇಂದ್ರ ಸರ್ಕಾರವಾಗಲಿ ನೇಮಕಾತಿ ಕುರಿತಂತೆ ಯಾವುದೇ ನಿರ್ದಿಷ್ಟ ಕ್ರಮ ಜರುಗಿಸದೆ, ಹೋರಾಟ ನಿರತ ಯುವಜನತೆಯ ಭಾವನೆಗಳಿಗೆ ಸ್ಪಂದಿಸದೆ ಇರುವುದು ತಾಳ್ಮೆಯ ಕಟ್ಟೆ ಒಡೆದು ಆಕ್ರೋಶ ಹೊರಹೊಮ್ಮುತ್ತಿದೆ. ಸೋಮವಾರದ ಹೋರಾಟಕ್ಕೆ ಪೊಲೀಸರು ಸರ್ಕಾರದ ಒತ್ತಡದಿಂದ ಬ್ರೇಕ್‌ ಹಾಕಿರಬಹುದು. ಆದರೆ, ಯುವ ಜನಾಂಗದ ಈ ಹೋರಾಟದ ಬೆಂಕಿಯಲ್ಲಿರುವ ಕೆಂಡದಂತೆ ಸದಾ ಜಾಗೃತವಾಗಿರುತ್ತದೆ. ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರ ಬವಣೆ ಅರಿತು ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸಬೇಕೆಂದು ಹೋರಾಟಗಾರರು ಎಚ್ಚರಿಸಿದರು. ಸರ್ಕಾರದ ನೇಮಕಾತಿಗೆ ಆಗ್ರಹಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದ ನಮ್ಮನ್ನು ಬಂಧಿಸುವ ಮೂಲಕ ಪೊಲೀಸ್‌ ಇಲಾಖೆ ಹೋರಾಟ ಹತ್ತಿಕ್ಕಿದೆ. ಧಾರವಾಡದಲ್ಲಿ ತುರ್ತು ಪರಿಸ್ಥಿತಿ ರೀತಿ ಉಂಟಾಗಿದೆ. ರಾಜ್ಯ ಸರ್ಕಾರ ತಾನೇ ಸಂವಿಧಾನ ನೀಡಿದ ಹಕ್ಕು ಉಲ್ಲಂಘಿಸಿದೆ. ಯುವ ಜನರ ಕ್ರಾಂತಿ ಆಗುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು.

ಯಲ್ಲಪ್ಪ ಹೆಗಡೆ, ಹೋರಾಟಗಾರರ ಮುಖಂಡಜನಸಾಮಾನ್ಯ ವೇದಿಕೆ ಸೇರಿದಂತೆ ಹತ್ತಾರು ಸಂಘಟನೆಗಳು ಪ್ರತಿಭಟನೆಗಾಗಿ ಮನವಿ ಸಲ್ಲಿಸಿದ್ದವು. ಆದರೆ, ಅವರ ಹೋರಾಟದ ರೂಪುರೇಷೆ ಸ್ಪಷ್ಟತೆ ಇರಲಿಲ್ಲ. ಆದ್ದರಿಂದ ಪರವಾನಗಿ ನೀಡಿರಲಿಲ್ಲ. ಆದರೂ ಪ್ರತಿಭಟನೆಗೆ ಮುಂದಾಗಿದ್ದರಿಂದ ಬಂಧಿಸಿ ಅವರನ್ನು ಬಿಡುಗಡೆ ಮಾಡಿದ್ದೇವೆ. ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಸಮುದಾಯದಲ್ಲಿ ಕಿಡಿಗೇಡಿಗಳು ಪರಿಸ್ಥಿತಿ ಲಾಭ ಪಡೆಯಬಾರದೆಂಬ ಕಾಳಜಿಯೂ ನಮ್ಮದಾಗಿದೆ.

ಎನ್‌. ಶಶಿಕುಮಾರ, ಪೊಲೀಸ್‌ ಆಯುಕ್ತ ಹುಬ್ಬಳ್ಳಿ-ಧಾರವಾಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ