ಮುಖ್ಯಮಂತ್ರಿಗಳ ಸೂಚನೆಯಂತೆ ರೌಡಿ ಪ್ರತಿಬಂಧಕ ದಳವನ್ನು ರಚಿಸಿದ್ದು, ಈ ದಳವು ರೌಡಿ ಶೀಟರ್ ಗಳ ಚಲನವಲನಗಳ ಬಗ್ಗೆ ಹತ್ತಿರದಿಂದ ಗಮನಿಸುತ್ತಿರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ರೌಡಿಸಂಗೆ ಬ್ರೇಕ್ ಹಾಕಲು 4 ಉಪ ವಿಭಾಗಗಳು ಹಾಗೂ 18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಪ್ರತಿಬಂಧಕ ದಳವನ್ನು (ಆಂಟಿ ರೌಡಿ ಸ್ಕ್ವಾಡ್) ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ರೌಡಿ ಪ್ರತಿಬಂಧಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪ್ರತಿ ಠಾಣೆಯಲ್ಲಿ ರೌಡಿ ಪ್ರತಿಬಂಧಕ ದಳ ರಚಿಸಿದ್ದು, ನಗರ ವ್ಯಾಪ್ತಿಯಲ್ಲಿ ಎಸಿಪಿಗಳು ಒಳಗೊಂಡ 108 ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.ಮುಖ್ಯಮಂತ್ರಿಗಳ ಸೂಚನೆಯಂತೆ ರೌಡಿ ಪ್ರತಿಬಂಧಕ ದಳವನ್ನು ರಚಿಸಿದ್ದು, ಈ ದಳವು ರೌಡಿ ಶೀಟರ್ ಗಳ ಚಲನವಲನಗಳ ಬಗ್ಗೆ ಹತ್ತಿರದಿಂದ ಗಮನಿಸುತ್ತಿರುತ್ತದೆ. ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 700 ರೌಡಿ ಶೀಟರ್ ಗಳಿದ್ದು, ಇವರಲ್ಲಿ ಸಕ್ರಿಯರಾಗಿರುವವರ ಬಗ್ಗೆ ಗಮನ ಹರಿಸಲಾಗುವುದು. ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿಗಳ ಸಂಖ್ಯೆಗೆ ಅನುಗುಣವಾಗಿ ಒಬ್ಬ ಎಸ್‌ಐ ಹಾಗೂ ನಾಲ್ವರು ಸಿಬ್ಬಂದಿ ತಂಡ ರಚಿಸಿದ್ದೇವೆ. ಈ ತಂಡವು ರೌಡಿಗಳ ಆರ್ಥಿಕ ಸ್ಥಿತಿಗತಿ, ಡಿಜಿಟಲ್ ಬೆರಳಚ್ಚಿನ ದಾಖಲೀಕರಣ ಮಾಡಿ ಅವರನ್ನು ಗಮನಿಸುತ್ತಿರುತ್ತಾರೆ ಎಂದು ಅವರು ತಿಳಿಸಿದರು.ಜಾಮೀನು ರಹಿತ ವಾರಂಟ್ ಇದ್ದವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈಗಾಗಲೇ ಎರಡು ಗೊಂಡಾ ಆಕ್ಟ್ ತೆರೆದಿದ್ದು, 20 ರೌಡಿಶೀಟರ್ ಹಾಗೂ ಡ್ರಗ್ ಪೆಡ್ಲರ್ ಗಳನ್ನು ಗಡಿಪಾರು ಮಾಡಲಾಗಿದೆ. ಮುಂದೆ ಡ್ರಗ್ ಪೆಡ್ಲರ್ ಮೇಲೂ ರೌಡಿ ಶೀಟ್ ತೆರೆಯುತ್ತೇವೆ ಎಂದರು.ಹಾಗೆಯೇ, ನಗರದಲ್ಲಿ ಈ ಹಿಂದೆ ರಚಿಸಿದ್ದ ರೌಡಿ ಪ್ರತಿಬಂಧಕ ದಳವು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ನೇತೃತ್ವದಲ್ಲಿ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.ಈ ಸಭೆಯಲ್ಲಿ ಡಿಸಿಪಿಗಳಾದ ಡಾ. ಹರ್ಷಾ ಪ್ರಿಯಂವದ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳಾದ ಕೆ.ಟಿ. ಮ್ಯಾಥ್ಯೂ ಥಾಮಸ್, ರವಿಪ್ರಸಾದ್, ಕೆ.ಸಿ. ಪ್ರಕಾಶ್, ಮೊಹಮ್ಮದ್ ಶರೀಫ್ ರಾವುತರ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.