ಕನ್ನಡಪ್ರಭ ವಾರ್ತೆ ಮೈಸೂರುಮಾದಕ ವಸ್ತುಗಳು ಹಾಗೂ ಡ್ರಗ್ಸ್ ಬಳಕೆ ಹಾಗೂ ಮಾರಾಟ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಮಾರಾಟ ಹಾಗೂ ಬಳಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಶ್ರೀನಿವಾಸ್ ತಿಳಿಸಿದರು.ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆಹಾರ ಪದಾರ್ಥಗಳಲ್ಲಿ, ಫಾಸ್ಟ್ ಫುಡ್ ಮಾರಾಟಗಾರರು ಕೃತಕ ಬಣ್ಣಗಳ ಬಳಕೆ ಮಾಡದಂತೆ ಫುಡ್ ಸೆಫ್ಟಿ ಅಧಿಕಾರಿಗಳು ಗಮನ ಹರಿಸಬೇಕು. ಆಗಾಗ್ಗೆ ಸ್ಟ್ರೀಟ್ ಫುಡ್ ಮಾರಾಟಗಾರರ ಕ್ಯಾಂಟಿನ್ ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ದಂಡ ವಿಧಿಸಿ ಪ್ರಕರಣ ದಾಖಲಿಸಬೇಕು ಎಂದು ಅವರು ಸೂಚಿಸಿದರು.ಹಣ್ಣು ತರಕಾರಿ ಮಾರಲು ಹಳ್ಳಿಗಳಿಂದ ಬರುವ ರೈತರಿಗೆ ನಗರ ಪಾಲಿಕೆ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಿಕೊಡಬೇಕು. ರಸ್ತೆ ಬದಿ ವ್ಯಾಪಾರಿಗಳಿಂದ ಪಾದಚಾರಿಗಳಿಗೆ ತೊಂದರೆ ಆಗಬಾರದು. ಚಿಕನ್ ಹಾಗೂ ಮಟನ್ ಶಾಪ್ ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಅವರು ಸೂಚಿಸಿದರು.ಸಮಿತಿ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಶರವಣ್ ಮಾತನಾಡಿ, ಬೀದಿ ಬದಿಯ ಫಾಸ್ಟ್ ಫುಡ್ ಅವರಿಗೆ ನಗರ ಪಾಲಿಕೆ ಪರವಾನಗಿ ನೀಡುವಾಗ ಸ್ವಚ್ಛತೆ ಕಾಪಾಡುವಂತೆ, ಗುಣಮಟ್ಟದ ಆಹಾರ ನೀಡುವಂತೆ ಹಲವು ನಿಬಂಧನೆ ವಿಧಿಸಬೇಕು ಎಂದು ಅವರು ಸೂಚಿಸಿದರು.ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಅವರಿಗೆ ಶಿಕ್ಷೆ ಆಗುವ ಹಾಗೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಕ್ಯಾಂಟಿನ್‌ನಲ್ಲಿ ಡ್ರಗ್ಸ್ ಮಾರಾಟ:
ಮತ್ತೋರ್ವ ಸದಸ್ಯ ಹಾಗೂ ವಿಧಾನ ಪರಿಷತ್‌ಸದಸ್ಯ ಕೋನರೆಡ್ಡಿ ಮಾತನಾಡಿ, ದೇಶದಲ್ಲೇ ಸ್ವಚ್ಛ ನಗರಿ ಎಂಬ ಬಿರುದು ಪಡೆದಿದ್ದು ಮೈಸೂರಿನ ಹೆಗ್ಗಳಿಕೆ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಇಂತಹ ಹೆಮ್ಮೆಯ ಗರಿ ಬರುತ್ತವೆ. ಮಾದಕ ವಸ್ತುಗಳ ಬಳಕೆ ತಪ್ಪಿಸಲು ಸಾರ್ವಜನಿಕರು ಸಹಕಾರ ಅತ್ಯಗತ್ಯ. ಪೋಷಕರು ತಮ್ಮ ಮಕ್ಕಳಲ್ಲಿ ಮಾದಕ ವಸ್ತುಗಳನ್ನು ಬಳಕೆ ಮಾಡದಂತೆ ಅರಿವು ಮೂಡಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪರವಾನಗಿ ನೀಡುವಾಗ ಮಾನದಂಡಗಳನ್ನು ಪರಿಗಣಿಸಬೇಕು ಎಂದರು.ವಿಧಾನ ಮಂಡಲ ಸದಸ್ಯರು ಹಾಗೂ ಸಮಿತಿ ಸದಸ್ಯರಾದ ಶರಣು ಸಲಗರ ಮಾತನಾಡಿ, ಮೈಸೂರು ವಿದ್ಯಾಭ್ಯಾಸಕ್ಕೆ ಹೆಸರಾಗಿದೆ. ಇಲ್ಲಿಗೆ ಹಲವು ದೇಶ ರಾಜ್ಯ ಹಾಗೂ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇವರಿಗೆ ಮಾದಕ ವಸ್ತುಗಳು ಡ್ರಗ್ಸ್ ಗಳು ಸಿಗದಂತೆ ನೋಡಿಕೊಳ್ಳಬೇಕು. ಹಲವು ಕಡೆ ಡ್ರಗ್ಸ್ ಸೀಜ್ ಮಾಡಲಾಗಿದೆ. ಆದರೂ ಡ್ರಗ್ ಮಾರಾಟ ಮಾಡುವವರಿಗೆ ಭಯ ಎಂಬುದು ಇಲ್ಲ. ರಾತ್ರೋ ರಾತ್ರಿ ಶ್ರೀಮಂತ ಆಗಬೇಕು ಎನ್ನುವವರು, ನಿರುದ್ಯೋಗ ಸಮಸ್ಯೆ ಇರುವವರು ಡ್ರಗ್ಸ್ ಮಾರಾಟಕ್ಕೆ ಇಳಿಯುತ್ತಿದ್ದಾರೆ. ಇಂಥವರಿಗೆ ಕಠಿಣ ಕಾನೂನು ರಚಿಸಬೇಕು ಎಂದರು.ಪ್ಲಾಸ್ಟಿಕ್ ಬಳಕೆ ನಿಷೇಧಿಸಿ:
ಟೀ ಅಂಗಡಿಗಳಲ್ಲಿ ಬಿಸಿ ಬಿಸಿ ಚಹಾವನ್ನು ಪ್ಲ್ಯಾಸ್ಟಿಕ್ ಲೋಟದಲ್ಲಿ, ಪಾಸ್ಟ್ ಪುಡ್ ಗಳಲ್ಲಿ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಆಹಾರ ನೀಡುತ್ತಾರೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ನಶಾ ಮುಕ್ತ ಜಿಲ್ಲೆ ಆಗಬೇಕು ಎಂದರು. ಶಾಸಕ ಹಾಗೂ ಸಮಿತಿ ಸದಸ್ಯ ದರ್ಶನ್ ಧ್ರುವ ನಾರಾಯಣ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಆಹಾರದ ಗುಣಮಟ್ಟ ಕಾಪಾಡಲು ಅವರಿಗೆ ಅರಿವು ಮೂಡಿಸಬೇಕು. ಬೀದಿ ಬದಿ ವ್ಯಾಪಾರದಿಂದ ಮೈಸೂರು ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಂಬಂಧಿಸಿದ ಬಡಾವಣೆಗಳಲ್ಲಿ ಸೂಕ್ತ ಜಾಗವನ್ನು ಹುಡುಕಿ ಸೌಲಭ್ಯ ಕಲ್ಪಿಸಿ ಪುಡ್ ಸ್ಟ್ರೀಟ್ ನಿರ್ಮಿಸಬೇಕು. ಜೂನ್ ತಿಂಗಳಲ್ಲಿ 280 ಕೆಜಿ ಯಷ್ಟು ಸುಮಾರು 319 ಕೋಟಿಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ವಿಧಾನ ಸಭೆಯ ಸದಸ್ಯರು ಹಾಗೂ ಸಮಿತಿಯ ಸದಸ್ಯರಾದ ಭೀಮಗೌಡ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಮೊದಲಾದವರು ಇದ್ದರು.