ಅಪಘಾತಕ್ಕೀಡಾದ ಆಪೆ ಆಟೋಗೆ ಇನ್ಶೂರೆನ್ಸ್ ಇಲ್ಲ: ಪೊಲೀಸರ ತನಿಖೆಯಿಂದ ಬೆಳಕಿಗೆ

KannadaprabhaNewsNetwork | Published : May 26, 2025 12:11 AM
ಮದ್ದೂರು ಪಟ್ಟಣದ ಹೊರ ವಲಯದ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಕಳೆದ ಬುಧವಾರ ಅಪಘಾತಕ್ಕೀಡಾಗಿದ್ದ ಆಪೆ ಆಟೋಗೆ ಇನ್ಶೂರೆನ್ಸ್ ಇಲ್ಲದಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
Follow Us

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಹೊರ ವಲಯದ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಕಳೆದ ಬುಧವಾರ ಅಪಘಾತಕ್ಕೀಡಾಗಿದ್ದ ಆಪೆ ಆಟೋಗೆ ಇನ್ಶೂರೆನ್ಸ್ ಇಲ್ಲದಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಇನ್ಶೂರೆನ್ಸ್ ಇಲ್ಲದೆ ಆಟೋ ಮಾಲೀಕ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಿಂದ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರನ್ನು ಕಾರ್ಖಾನೆಗೆ ಕರೆತರುವುದು ಮತ್ತು ಅವರ ಗ್ರಾಮಗಳಿಗೆ ಆಟೋದಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದನು.

ಆ ನಂತರ ಬುಧವಾರ ಸಂಜೆ ಆಟೋ ಅಪಘಾತಕೀಡಾಗಿ 12 ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಬಳಿಕ ಆಟೋ ಚಾಲಕ ಇನ್ಶೂರೆನ್ಸ್ ಇಲ್ಲದ ಕಾರಣ ಆಟೋವನ್ನು ಬಚ್ಚಿಟ್ಟು ಯಾವುದೇ ಅಪಘಾತವಾಗಿಲ್ಲ ಎಂದು ಆಟೋ ಮಾಲೀಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೊರಟಿದ್ದನು. ಈ ಬಗ್ಗೆ ಎಚ್ಚರಗೊಂಡ ಸಂಚಾರಿ ಠಾಣೆ ಪೊಲೀಸರು ಆಟೋವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇನ್ಶೂರೆನ್ಸ್ ಇಲ್ಲದಿರುವುದು ಬಯಲಿಗೆ ಬಂದಿದೆ.

ಈ ಮಧ್ಯ ಅಪಘಾತದಲ್ಲಿ ಗಾಯಗೊಂಡಿದ್ದ ತೀವ್ರವಾಗಿ ಗಾಯಗೊಂಡು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಗೊಂಡಿರುವ ಕಾರ್ಮಿಕೆ ಪೂರ್ಣಿಮಾ ಚೇತರಿಸಿ ಕೊಳ್ಳುತ್ತಿದ್ದು, ಆಕೆಗೆ ಒಂದು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಗೆಜ್ಜಲಗೆರೆಯ ಶಾಹಿ ಗಾರ್ಮೆಂಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕುಡಿದು ಹೆದ್ದಾರಿಯಲ್ಲಿ ವಾಹನಗಳ ಅಡ್ಡಗಟ್ಟಿ ಯುವಕನ ಪುಂಡಾಟ

ಶ್ರೀರಂಗಪಟ್ಟಣ:

ಕುಡಿದ ಮತ್ತಿನಲ್ಲಿ ಯುವಕನೊಬ್ಬ ತಾಲೂಕಿನ ಕಿರಂಗೂರು ಗ್ರಾಮದ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪುಂಡಾಟ ನಡೆಸಿರುವ ಘಟನೆ ನಡೆದಿದೆ.

ಗ್ರಾಮದ ಬನ್ನಮಂಟಪ ವೃತ್ತದ ಬಳಿ ಭಾನುವಾರ ಸಂಜೆ ಕಂಠಪೂರ್ತಿ ಕುಡಿದು ಜಿಟಿ ಮಳೆಯಲ್ಲಿ ಹೆದ್ದಾರಿಯಲ್ಲಿ ಬರುವ ವಾಹನ ಅಡ್ಡಗಟ್ಟಿ ರಂಪಾಟ ನಡೆಸಿದ್ದಾನೆ. ಕುಡಿದು ವಾಹನಗಳನ್ನು ಅಡ್ಡಗಟ್ಟಿ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಮೊಬೈಲ್‌ನಲ್ಲಿ ಸೆರೆ ಹಿಡಿದ ವೀಡಿಯೋ ಎಲ್ಲಡೆ ಭಾರಿ ವೈರಲ್ ಆಗುತ್ತಿದೆ.

ಹೆದ್ದಾರಿಯಲ್ಲಿ ಸಾಗುವ ಕೆಲವು ವಾಹನಗಳನ್ನು ನಿಲ್ಲಿಸಿ ವಾಹನ ಚಾಲಕರ ಮೇಲೆ ಹಲ್ಲೆಗೂ ಯತ್ನ ನಡೆಸಿರುವ ಯುವಕನ ಪುಂಡಾಟದಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿರುವ ಘಟನೆ ಸಂಭವಿಸಿದೆ.

ಆ ಯುವಕನನ್ನು ರಸ್ತೆ ಮಧ್ಯೆಯಿಂದ ಎಳೆದು ತರಲು ಹೋದ ಸಾರ್ವಜನಿಕರ ಮೇಲು ದಬ್ಬಾಳಿಕೆ ನಡೆಸಿದ್ದು, ಕುಡುಕ ಯುವಕನ ರಂಪಾಟದಿಂದ ಹೆದ್ದಾರಿ ವಾಹನ ಸವಾರರು ಕೆಲಕಾಲ ಹೈರಾಣಾಗಿದ್ದಾರೆ.