- ಪೊಲೀಸ್ ಸಿಬ್ಬಂದಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತು ಜಾಗೃತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜಕ್ಕೆ ಮಾರಕವಾಗಿರುವ ಮಾದಕ ವಸ್ತುಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿ ಹಾಗೂ ಯುವ ಜನತೆ ವ್ಯಸನದ ಚಟಕ್ಕೆ ಬಲಿಯಾಗದೇ ರಕ್ಷಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.ನಗರದ ಶ್ರೀ ಶಕ್ತಿ ಮದ್ಯವ್ಯಸನಿಗಳ ಸಮಗ್ರ ಪುನರ್ ವಸತಿ ಕೇಂದ್ರ, ಜಿಲ್ಲಾ ಪೊಲೀಸ್ ಇಲಾಖೆ, ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಸಂಯುಕ್ರಾಶ್ರಯದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಿಂದ ಮಾದಕ ವಸ್ತುಗಳಿಗೆ ಕಡಿವಾಣಕ್ಕೆ ವಿವಿಧ ಸಮಿತಿ ರಚಿಸಿ ಮಾರ್ಗಸೂಚಿ ನೀಡಲಾಗುತ್ತಿದೆ. ಈ ನಡುವೆ ದೇಶದ ನಾಗರಿಕರು ಹಾಗೂ ವ್ಯಸನಿಗಳ ಸಂಪರ್ಕ ಹೊಂದಿದ ವ್ಯಕ್ತಿಗಳು ದುಶ್ಚಟಕ್ಕೆ ಒಳಗಾದ ವ್ಯಕ್ತಿಗಳನ್ನು ನಶೆಮುಕ್ತಗೊಳಿಸಲು ವ್ಯಸನಿಗಳನ್ನು ಚಿಕಿತ್ಸಾ ಕೇಂದ್ರಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಪೆಟ್ಟಿಗೆ ಅಂಗಡಿಗಳಲ್ಲಿ ನಶೆ ಪದಾರ್ಥಗಳು ಸಲೀಸಾಗಿ ಲಭ್ಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಹಾಗೂ ಕಾನೂನು ಸೇವೆ ಪ್ರಾಧಿಕಾರ ಎಚ್ಚರಿಕೆ ವಹಿಸುವುದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಯುವ ಜನತೆಯಲ್ಲಿ ಅರಿವು ಮೂಡಿಸುತ್ತಿದ್ದು ಎಲ್ಲರೂ ಕೈಜೋಡಿಸಿದಾಗ ಮಾತ್ರ ಶಾಶ್ವತವಾಗಿ ವ್ಯಸನದ ವ್ಯವಸ್ಥೆ ದೂರಗೊಳಿಸಬಹುದು ಎಂದು ಹೇಳಿದರು.ವ್ಯಸನಿಗಳ ನಿಯಂತ್ರಿಸಲು ಅರಿವಿನ ಜೊತೆಗೆ ಜ್ಞಾನದ ಅವಶ್ಯವಿದೆ. ಆ ನಿಟ್ಟಿನಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆ ಸಕ್ರಿಯವಾಗಿ ತೊಡಗಿಸಿಕೊಂಡು ವ್ಯಸನಿಗಳನ್ನು ನಾಡಿನ ಸತ್ಪ್ರಜೆಗಳಾಗಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಜೊತೆಗೆ ಪೊಲೀಸ್ ಇಲಾಖೆ ನಿತ್ಯ ಈ ರೀತಿ ಪ್ರಕರಣಗಳು ದಾಖಲಾಗುತ್ತಿದ್ದು, ವ್ಯಸನಿಗಳ ಮನಃಪರಿವರ್ತಿಸಲು ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.ಉಪ ಪೊಲೀಸ್ ಅಧೀಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಮಾದಕ ವಸ್ತುಗಳ ಶಾರೀರಿಕ ಹಾಗೂ ದೈಹಿಕವಾಗಿ ಆರೋಗ್ಯ ಹದಗೆಡಿಸುತ್ತದೆ. ಇದರಿಂದ ದೇಶದಲ್ಲಿ ಪ್ರತಿದಿನ ಸುಮಾರು 10 ಮಂದಿ ವ್ಯಸನದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪೊಲೀಸ್ ಸೇರಿದಂತೆ ನಾಗರಿಕರು ಒಟ್ಟಾಗಿ ಈ ವಿರುದ್ಧ ಕಾರ್ಯಪ್ರವೃತ್ತರಾಗಬೇಕು ಎಂದರು.ರಾಜ್ಯಮಟ್ಟದ ಸಮನ್ವಯ ಸಂಸ್ಥೆ ಕೋ ಆಡಿನೇಟರ್ ಶೈಲಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಜನತೆಯನ್ನು ನಶೆಮುಕ್ತಗೊಳಿಸಲು ಕೇಂದ್ರ ಸರ್ಕಾರ ನಸೆಮುಕ್ತ ಭಾರತ ಅಭಿಯಾನ ಜಾರಿಗೊಳಿಸಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈ ಅಭಿಯಾನ ನಡೆಯುತ್ತಿದ್ದು ಎಸ್ಪಿ ಸೇರಿದಂತೆ ಹಾಗೂ ಸ್ವಯಂ ಸೇವಕರು ಈ ಅಭಿಯಾನದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.ಶ್ರೀ ಶಕ್ತಿ ಮದ್ಯವ್ಯಸನಿಗಳ ಸಮಗ್ರ ಪುನರ್ ವಸತಿ ಕೇಂದ್ರದ ಯೋಜನಾ ನಿರ್ದೇಶಕ ಡಾ. ಅನೀತ್ ಕುಮಾರ್ ಮಾತ ನಾಡಿ, ಮದ್ಯ ಹಾಗೂ ಮಾದಕ ವಸ್ತುಗಳಿಂದ ಬಳಲುತ್ತಿರುವ ಯುವ ಸಮೂಹವನ್ನು ಹತೋಟಿಗೆ ತರಲು ಎಲ್ಲರೂ ಮುಂದಾದರೆ ಮಾತ್ರ ಸ್ವಾಸ್ಥ್ಯ ಸಮಾಜಕ್ಕೆ ನಾಂದಿಯಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ರಾಜ್ಯಮಟ್ಟದ ಸಮನ್ವಯ ಸಂಸ್ಥೆ ರಾಜ್ಯ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣರಾಜು, ರೋಟರಿ ಅಧ್ಯಕ್ಷ ಎನ್.ಪಿ.ಲಿಖಿತ್, ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್, ಪ್ರಜಾಪಿತ ಬ್ರಹ್ಮಕುಮಾರಿಸ್ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯ, ಶ್ರೀ ಶಕ್ತಿ ಮದ್ಯವ್ಯಸನಿಗಳ ಸಮಗ್ರ ಪುನರ್ ವಸತಿ ಕೇಂದ್ರ ವ್ಯವಸ್ಥಾಪಕ ಮಂಜುನಾಥ್ ಉಪಸ್ಥಿತರಿದ್ದರು. 12 ಕೆಸಿಕೆಎಂ 1ಚಿಕ್ಕಮಗಳೂರಿನ ರೋಟರಿ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗೆ ಏರ್ಪಡಿಸಿದ್ದ ಮಾದಕ ವಸ್ತುವಿನ ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿದರು.