ಪತ್ರಕರ್ತರು-ಪೊಲೀಸ್ ಉತ್ತಮ ಬಾಂಧವ್ಯ ಅಗತ್ಯ: ಮಂಜುನಾಥ್

KannadaprabhaNewsNetwork |  
Published : Oct 30, 2026, 03:00 AM IST
 | Kannada Prabha

ಸಾರಾಂಶ

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಇಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದಾಗ ಸಮಾಜವನ್ನು ತಿದ್ದಲು ಸಾಧ್ಯ ಎಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹೇಳಿದರು.

ಸಿದ್ದಾಪುರ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಇಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದಾಗ ಸಮಾಜವನ್ನು ತಿದ್ದಲು ಸಾಧ್ಯ ಎಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹೇಳಿದರು.

ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿದ್ದಾಪುರದ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು, ಪೊಲೀಸರು ಹಾಗೂ ರಾಜಕಾರಣಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರು ಸಮಾಜದ ಕಣ್ಣಾಗಿದ್ದು, ತಪ್ಪುಗಳನ್ನು ತಿದ್ದುವ ಮೂಲಕ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದಾರೆ ಎಂದರು.ಮಾದಕ ವಸ್ತುಗಳ ಬಳಕೆ ಹಾಗೂ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ವಿರುದ್ಧ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಿ, ಕಾನೂನಿನ ಅರಿವು ಮೂಡಿಸುತ್ತಿರುವ ಸಿದ್ದಾಪುರ ಠಾಣೆಯ ಪಿಎಸ್‌ಐ ಮಂಜುನಾಥ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಕ್ರಿಕೆಟ್ ಪಂದ್ಯಾಟದ ಫಲಿತಾಂಶ

ಪಂದ್ಯಾಟದಲ್ಲಿ ಮೀಡಿಯಾ ಕ್ಯಾಪ್ಟನ್ 6 ತಂಡ ಪ್ರಥಮ ಸ್ಥಾನ ಪಡೆದರೆ, ಮೀಡಿಯಾ ವಾರಿಯರ್ಸ್ ದ್ವಿತೀಯ ಹಾಗೂ ಮೀಡಿಯಾ ಸೂಪರ್ ಕಿಂಗ್ಸ್ ತೃತೀಯ ಸ್ಥಾನ ಗಳಿಸಿತು. ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಹೇಮಂತ್ ವಿರಾಜಪೇಟೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಸತೀಶ್ ಸಿದ್ದಾಪುರ, ಉತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ಇಸ್ಮಾಯಿಲ್ ಕಂಡಕರೆ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಸ್ತಫ ಸಿದ್ದಾಪುರ ಪಡೆದುಕೊಂಡರು. ಫೇರ್ ಪ್ಲೇ ಪ್ರಶಸ್ತಿ ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಪಾಲಾಯಿತು. ಇದೇ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸರು ಹಾಗೂ ಪತ್ರಕರ್ತರ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾಟ ನಡೆಯಿತು.

ರಾಷ್ಟ್ರೀಯ ಸಮಿತಿ ಸದಸ್ಯ ಪಾರ್ಥ ಚಿನ್ನಪ್ಪ, ಜಿಲ್ಲಾ ಸಂಘದ ಉಪಾಧ್ಯಕ್ಷ ಎ.ಎನ್. ವಾಸು, ನಿರ್ದೇಶಕರಾದ ಸುಬ್ರಮಣಿ, ಇಸ್ಮಾಯಿಲ್ ಕಂಡಕರೆ, ರವಿಕುಮಾರ್, ತಾಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಸಹ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ತೇಜಸ್ ಪಾಪಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು