ನಗರದಲ್ಲಿ ಮಹಿಳಾ ಪಿಜಿಗಳಿಗೆ ನಸುಕಿನಲ್ಲಿ ನುಗ್ಗಿ ಲೈಂಗಿಕ ಕಿರುಕುಳ ನೀಡಿ, ಸುಲಿಗೆ ಮಾಡುತ್ತಿದ್ದ ಕಿಡಿಗೇಡಿಯೊಬ್ಬನಿಗೆ ಚಿಕ್ಕಜಾಲ ಠಾಣೆ ಪೊಲೀಸರು ಶನಿವಾರ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮಹಿಳಾ ಪಿಜಿಗಳಿಗೆ ನಸುಕಿನಲ್ಲಿ ನುಗ್ಗಿ ಲೈಂಗಿಕ ಕಿರುಕುಳ ನೀಡಿ, ಸುಲಿಗೆ ಮಾಡುತ್ತಿದ್ದ ಕಿಡಿಗೇಡಿಯೊಬ್ಬನಿಗೆ ಚಿಕ್ಕಜಾಲ ಠಾಣೆ ಪೊಲೀಸರು ಶನಿವಾರ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಆಂಧ್ರದ ಮದನಪಲ್ಲಿಯ ಪಟ್ಟು ನರೇಶ್ ಬಂಧಿತ ಆರೋಪಿ. ತರಹುಣಸೆಯ ಚಪ್ಪರದ ಕಲ್ಲು ರಸ್ತೆಯಲ್ಲಿರುವ ಟೆರಾ ಫಾರ್ಮ್ ಹೌಸ್ ಸಮೀಪ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಬಂಧಿಸುವ ವೇಳೆ ತಮ್ಮ ವಿರುದ್ಧ ತಿರುಗಿ ಬಿದ್ದ ಆರೋಪಿಗೆ ಆತ್ಮರಕ್ಷಣೆ ಸಲುವಾಗಿ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಗುಂಡು ಹಾರಿಸಿದ್ದಾರೆ. ಈ ವೇಳೆ ಎಡಗಾಲಿಗೆ ಗುಂಡು ಹೊಕ್ಕು ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆ
2ನೇ ಹಂತದಿಂದ ಜಿಗಿದು ಪರಾರಿ:
ನರೇಶ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಆತನ ವಿರುದ್ಧ ಆಂಧ್ರ ಹಾಗೂ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮಹಿಳಾ ಪಿಜಿಗಳನ್ನೇ ಗುರಿಯಾಗಿಸಿಕೊಂಡು ಆತ ದುಷ್ಕೃತ್ಯ ಎಸಗುತ್ತಿದ್ದ. ಕಳೆದ ವರ್ಷ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಯತ್ನಿಸಿದ್ದಾಗ ಆತನನ್ನು ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದು ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದ್ದ.
ಐಟಿ-ಬಿಟಿ ಕಂಪನಿಗಳಲ್ಲಿ ದುಡಿಯುವ ಮಹಿಳೆಯರು ತಡರಾತ್ರಿ ಕೆಲಸ ಮುಗಿಸಿ ಪಿಜಿಗಳಿಗೆ ಮರಳುತ್ತಿದ್ದರು. ಹೀಗಾಗಿ ಮಧ್ಯರಾತ್ರಿ ಬರುವ ತಮ್ಮ ಗೆಳೆತಿಯರಿಗೆ ಕೋಣೆ ಬಾಗಿಲು ಬಂದ್ ಮಾಡದೆ ಅವರು ನಿದ್ರೆಗೆ ಜಾರುತ್ತಿದ್ದರು. ಇದು ನರೇಶ್‌ಗೆ ವರದಾನವಾಗಿತ್ತು. ನಸುಕಿನಲ್ಲಿ ಆ ಮಹಿಳಾ ಪಿಜಿಗಳಿಗೆ ನುಗ್ಗುತ್ತಿದ್ದ ನರೇಶ್, ಅಲ್ಲಿ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಹಣ ದೋಚುತ್ತಿದ್ದ. ಈ ವೇಳೆ ಮಹಿಳೆಯರು ಎಚ್ಚರಗೊಂಡರೆ ಅವರ ಮುಂದೆಯೇ ಹಸ್ತಮೈಥುನ ಮಾಡಿಕೊಳ್ಳುವುದಲ್ಲದೆ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನು ಸಹ ಆತ ಎಸಗುತ್ತಿದ್ದ.
ಅದೇ ರೀತಿ 2 ದಿನಗಳ ಹಿಂದೆ ಚಿಕ್ಕಜಾಲ ಸಮೀಪದ ಪಿಜಿಗೆ ನರೇಶ್ ನುಗ್ಗಿದ್ದ. ಆಗ ಕೋಣೆಯಲ್ಲಿದ್ದ ಮಹಿಳೆ ಮೇಲೆ ಆರೋಪಿ ಅತ್ಯಾಚಾರಕ್ಕೆ ಎಸಗಿದ್ದಾನೆ. ತನ್ನ ಕೋಣೆಯಲ್ಲಿ ಅನಿರೀಕ್ಷಿತವಾಗಿ ಆಗಂತುಕನ್ನು ನೋಡಿ ಭಯಗೊಂಡು ಆಕೆ ರಕ್ಷಣೆಗೆ ಜೋರಾಗಿ ಕೂಗಿಕೊಂಡಿದ್ದಾಳೆ. ಈ ಚೀರಾಟ ಕೇಳಿ ಅಕ್ಕಪಕ್ಕದ ಪಿಜಿಗಳ ವಾಸಿಗಳು ಹೊರ ಬಂದಿದ್ದಾರೆ. ಆಗ ಜನ ಜಮಾವಣೆಗೊಂಡ ಕೂಡಲೇ 2ನೇ ಅಂತಸ್ತಿನಲ್ಲಿದ್ದ ಆ ಕೋಣೆಯಿಂದ ಜಿಗಿದು ನರೇಶ್ ತಪ್ಪಿಸಿಕೊಂಡಿದ್ದ. ಇದೇ ರೀತಿ ಒಂದು ವಾರದ ಅವಧಿಯಲ್ಲಿ ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳು ವರದಿಯಾಗಿದ್ದವು.
ಬೇಟೆಗೀಳಿದ ಪೊಲೀಸರು
ಈ ಲೈಂಗಿಕ ಕಿರುಕುಳ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿ ಪತ್ತೆಗೆ ದೇವನಹಳ್ಳಿ ಉಪ ವಿಭಾಗದ ಎಸಿಪಿ ಶ್ರೀ ಹರ್ಷ ಹಾಗೂ ಚಿಕ್ಕಜಾಲ ಠಾಣೆ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಚಿಕ್ಕಜಾಲ ವ್ಯಾಪ್ತಿಯಲ್ಲಿ ನಾಕಾ ಬಂದ್ ಮಾಡಿ ನಸುಕಿನಲ್ಲಿ ಬೈಕ್‌ಗಳಲ್ಲಿ ಏಕಾಂಗಿ ಸಂಚರಿಸುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಅಲ್ಲದೆ ಪಿಜಿಯಲ್ಲಿ ಲೈಂಗಿಕ ಕಿರುಕುಳ ಎಸಗಿದ ಬಳಿಕ ಕೆಂಪು ಬಣ್ಣದ ಬೈಕ್‌ನಲ್ಲಿ ನರೇಶ್ ಪರಾರಿ ಆಗಿದ್ದನ್ನು ಸಂತ್ರಸ್ತೆ ಮಾಹಿತಿ ಕೊಟ್ಟಿದ್ದರು.
ಈ ಸುಳಿವು ಆಧರಿಸಿ ಪತ್ತೆದಾರಿಕೆಯನ್ನು ಪೊಲೀಸರು ತೀವ್ರಗೊಳಿಸಿದ್ದರು. ಆಗ ಹುಣಸಮಾರನಹಳ್ಳಿ ಸಮೀಪ ಪೊಲೀಸರಿಗೆ ಶುಕ್ರವಾರ ರಾತ್ರಿ ಬೈಕ್‌ನಲ್ಲಿ ನರೇಶ್ ಎದುರಾಗಿದ್ದಾನೆ. ಆದರೆ ಪೊಲೀಸರನ್ನು ನೋಡಿದ ಕೂಡಲೇ ಆತ ತಪ್ಪಿಸಿಕೊಂಡಿದ್ದಾನೆ. ಇದಾದ ಕೆಲ ಹೊತ್ತಿನಲ್ಲೇ ತರುಹುಣಸೆ ಬಳಿ ಮತ್ತೆ ಆತ ಪೊಲೀಸರನ್ನು ಕಂಡು ಕಾಲ್ಕಿತ್ತಿದ್ದಾನೆ. ಈತನ ನಡವಳಿಕೆ ಮೇಲೆ ಶಂಕೆಗೊಂಡು ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ಕೊಟ್ಟಿದ್ದಾರೆ. ಅದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪಿಐ ಮಲ್ಲಿಕಾರ್ಜುನ್ ಅವರಿಗೆ ಸುದ್ದಿ ತಲುಪಿದೆ. ಈ ಮಾಹಿತಿ ತಿಳಿದ ಕೂಡಲೇ ಜಾಗ್ರತರಾದ ಪಿಐ ತಂಡವು, ಆರೋಪಿಯನ್ನು ಬೆನ್ನಟ್ಟಿದೆ. ಆಗ ಚಪ್ಪರದಕಲ್ಲು ಸಮೀಪ ಟೆರ್ರಾ ಫಾರ್ಮ್ ಹೌಸ್‌ನ ಲೇಔಟ್‌ಗೆ ನುಗ್ಗಿದ್ದಾನೆ. ಈ ವೇಳೆ ಶರಣಾಗುವಂತೆ ಪೊಲೀಸರ ಸೂಚನೆ ಧಿಕ್ಕರಿಸಿ ತನಿಖಾ ತಂಡದ ವಿರುದ್ಧವೇ ಆರೋಪಿ ತಿರುಗಿ ಬಿದ್ದಿದ್ದಾನೆ. ಆಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಮತ್ತೆ ಶರಣಾಗುವಂತೆ ಆತನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಎಚ್ಚರಿಕೆಗೂ ಬಗ್ಗದೆ ಮತ್ತೆ ದಾಳಿಗಿಳಿದಾಗ ಆತನ ಎಡಗಾಲಿಗೆ ಪಿಐ ಮಲ್ಲಿಕಾರ್ಜುನ್ ಗುಂಡು ಹಾರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.