ಗಣೇಶೋತ್ಸವವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ಆಚರಿಸಲು ಹು-ಧಾ ಮಹಾನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ಗೆ 400 ಅಧಿಕಾರಿಗಳು, 2,100 ಸಿವಿಲ್ ಪೊಲೀಸ್ ಸಿಬ್ಬಂದಿ, 600 ಸಶಸ್ತ್ರ ಪಡೆ ಹಾಗೂ 500 ಗೃಹರಕ್ಷಕದಳ ಸಿಬ್ಬಂದಿ ನಿಯೋಜಿಸಲಾಗಿದೆ.
ಹುಬ್ಬಳ್ಳಿ:
ಗಣೇಶೋತ್ಸವವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ಆಚರಿಸಲು ಹು-ಧಾ ಮಹಾನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ಗೆ 400 ಅಧಿಕಾರಿಗಳು, 2,100 ಸಿವಿಲ್ ಪೊಲೀಸ್ ಸಿಬ್ಬಂದಿ, 600 ಸಶಸ್ತ್ರ ಪಡೆ ಹಾಗೂ 500 ಗೃಹರಕ್ಷಕದಳ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ಸಿಆರ್‌ಪಿ, ಕೆಎಸ್‌ಆರ್‌ಪಿ ಹಾಗೂ ಒಂದು ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಬಳಸಿಕೊಳ್ಳಲಾಗುತ್ತಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಹಾನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಮೂರು ಹಂತದಲ್ಲಿ ನೇರ ಮೇಲ್ವಿಚಾರಣೆ ನಡೆಯಲಿದೆ. ಮೆರವಣಿಗೆ ಮಾರ್ಗಗಳ ಮೇಲೆ 30ಕ್ಕೂ ಅಧಿಕ ಡ್ರೋನ್‌ಗಳಿಂದ ಕಣ್ಗಾವಲು ಇರಲಿದೆ. ಮಹಾನಗರ ಪಾಲಿಕೆಯಿಂದ 15 ವಾಚ್ ಟವರ್ ನಿರ್ಮಿಸಲು ಮನವಿ ಮಾಡಿದ್ದು, ಕಟ್ಟಡಗಳ ಮೇಲ್ಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು "ಸ್ಕೈ ಸೆಂಟರ್ " ಆಗಿ ನಿಯೋಜಿಸಲಾಗುವುದು. ಬಾಡಿ ವೋರ್ನ್ ಕ್ಯಾಮೆರಾಗಳನ್ನೂ ಸಿಬ್ಬಂದಿಗೆ ನೀಡಲಾಗಿದೆ. ಎರಡು ಮೆರವಣಿಗೆಗಳು ಒಂದೇ ಜಂಕ್ಷನ್‌ನಲ್ಲಿ ಸೇರದಂತೆ ಹೊಸ ವ್ಯವಸ್ಥೆ ಮಾಡಲಾಗಿದೆ. ಒಂದು ಮೆರವಣಿಗೆ ತೆರಳಿದ ಬಳಿಕವೇ ಮತ್ತೊಂದಕ್ಕೆ ಅವಕಾಶ ನೀಡಲಾಗುವುದು ಎಂದರು.
ಗಣೇಶ ಮಂಡಳಿಗಳು ಶಬ್ದಮಾಲಿನ್ಯ ನಿಯಮ ಪಾಲಿಸಬೇಕು. ಸೌಂಡ್ ಮೀಟರ್ ಮೂಲಕ ಶಬ್ದದ ಪ್ರಮಾಣ ಪರಿಶೀಲಿಸಲಾಗುವುದು. ಲೇಸರ್ ಲೈಟ್ ಹಾಗೂ ತೀವ್ರ ಶಬ್ದ ಉಂಟು ಮಾಡುವ ಹೆಚ್ಚುವರಿ ಸಾಧನಗಳಿಗೆ ಅವಕಾಶವಿಲ್ಲ. ಪ್ರತಿ ಪೆಂಡಾಲ್‌ನಲ್ಲಿ ಅಗ್ನಿಶಾಮಕ ಸಾಧನ, ನೀರು ಮತ್ತು ಮರಳಿನ ಬಕೆಟ್ ಇರಿಸಬೇಕು. ಆ್ಯಂಬುಲೆನ್ಸ್, ಪೊಲೀಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ದಾರಿ ಬಿಡಬೇಕು. ರಾತ್ರಿ ಕನಿಷ್ಠ ಒಬ್ಬರು-ಇಬ್ಬರು ಕಾರ್ಯಕರ್ತರು ಪೆಂಡಾಲ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಕಳೆದ 10 ದಿನಗಳಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ, 17 ಅಬಕಾರಿ ಹಾಗೂ 6 ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್, ಮೆಟಲ್ ಡಿಟೆಕ್ಟರ್, ಆಲ್ಕೋಮೀಟರ್ ಹಾಗೂ ನಾರ್ಕೋಟಿಕ್ಸ್ ಕಿಟ್‌ಗಳೊಂದಿಗೆ ತಪಾಸಣೆ ನಡೆಯಲಿದೆ. ಮದ್ಯ ಅಥವಾ ಮಾದಕ ವಸ್ತು ಸೇವಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಯುವಕರಿಗೆ ಲಾಠಿ ರುಚಿಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಕೆಲ ಯುವಕರು ಗಲಾಟೆ ಹಾಗೂ ಅಸಭ್ಯ ವರ್ತನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ ಘಟನೆ ನಗರದ ಗಣೇಶಪೇಟೆಯಲ್ಲಿ ಶನಿವಾರ ರಾತ್ರಿ ನಡೆದಿದೆ.ಮೆರವಣಿಗೆಯಲ್ಲಿ ಭಾರಿ ಜನಸ್ತೋಮ ಸೇರಿದ್ದು, ಮೇದಾರ ಓಣಿ ಹಾಗೂ ಕಲಾಲ್ ಓಣಿ ಗಣೇಶ ಮೂರ್ತಿಗಳ ಮೆರವಣಿಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯ ಬಳಿ ಮುಖಾಮುಖಿಯಾಗಿತ್ತು. ಈ ವೇಳೆ ಕಲಾಲ್ ಓಣಿ ಮೆರವಣಿಗೆಯ ಡಿಜೆ ಎದುರು ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಎಚ್ಚರಿಕೆ ನೀಡಿದರು. ಆದರೂ ವರ್ತನೆ ಮುಂದುವರಿಸಿದ್ದರಿಂದ ಪೊಲೀಸರು 30 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಬಲಪ್ರಯೋಗ ಮಾಡಿ ಗುಂಪನ್ನು ಚದುರಿಸಿದರು. ಲಾಠಿ ಏಟು ಬೀಳುತ್ತಿದ್ದಂತೆ ಕೆಲ ಯುವಕರು ದಿಕ್ಕಾಪಾಲಾಗಿ ಓಡಿದರು.ಈ ಕುರಿತು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸ್ಪಷ್ಟನೆ ನೀಡಿದ್ದು, ಘಟನೆ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.