ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 131 ರನ್‌ಗಳ ಬೃಹತ್ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಮಾಧ್ಯಮ ತಂಡವು 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಕೇವಲ 3 ರನ್‌ಗಳಿಂದ ವಿರೋಚಿತ ಸೋಲನ್ನು ಕಂಡಿತು.
ಮಾಧ್ಯಮ ವಿಭಾಗದ ದಾಂಡಿಗ ರಮೇಶ್ 32 ಬಾಲ್‌ಗಳಲ್ಲಿ 63 ರನ್‌ಗಳ ಗಳಿಸಿ ಅಜೇಯರಾಗಿ ಉಳಿದರು. ಇವರ ಆಟದ ವೈಖರಿಯಲ್ಲಿ 2 ಬೌಂಡರಿ, 7 ಭರ್ಜರಿ ಸಿಕ್ಸ್ ಬಂದವು. ಪೊಲೀಸ್ ವಿಭಾಗದಲ್ಲಿ ಬಾಗೇಪಲ್ಲಿ ಠಾಣೆಯ ಪಿಎಸ್‌ಐ ಸುನಿಲ್ 23 ಬಾಲುಗಳಲ್ಲಿ 43 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಗೇಪಲ್ಲಿ ಡಿ.ಎ.ಆರ್. ಪೊಲೀಸ್ ಪೇದೆ ರಾಜು 19 ಬಾಲ್‌ಗಳಲ್ಲಿ 43 ರನ್ ಸಿಡಿಸಿ ರಾಮದಾಸ್ ಬೌಲಿಂಗ್‌ನಲ್ಲಿ ಕ್ಯಾಚಿತ್ತರು.ಯಾವುದೇ ರಾಷ್ಟ್ರೀಯ ಆಟಗಳಿಗೂ ಕಡಿಮೆಯಿಲ್ಲದಂತೆ ರಣರೋಚಕವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮದವರ ನಡುವೆ ನಡೆದಿದ್ದು ಉತ್ತಮ ಬಾಂಧವ್ಯಕ್ಕೆ ಭದ್ರ ಬುನಾದಿ ಹಾಕಿತು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥರೈ ಮಾತನಾಡಿ, ಮಾಧ್ಯಮ ಮತ್ತು ಪೊಲೀಸ್ ಇಲಾಖೆ ನಡುವೆ ನಡೆದ ಕ್ರಿಕೆಟ್ ಆಟ ತುಂಬಾ ಚೆನ್ನಾಗಿ ಮೂಡಿಬಂದಿತು. ನಿಮ್ಮ ಕೆಲಸ ನಮ್ಮಷ್ಟೇ ಮಹತ್ವದ್ದಾಗಿದ್ದು ರಾತ್ರಿ- ಹಗಲು ಕೆಲಸ ಮಾಡುವಂತಹದ್ದು. ಇಂತಹ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಿದ್ದೇವೆ. ರಮೇಶ್ ಅವರ ಅಮೋಘ ಆಟದ ನಡುವೆ ನಮ್ಮ ತಂಡ ಗೆಲುವು ಕಂಡಿದೆ. ಇದು ವರ್ಷಕ್ಕೆ ಒಮ್ಮೆ ಆಡುವ ಬದಲು ಆಗಾಗ ನಡೆಯಲಿ ಎಂದರು.
ಈ ವೇಳೆ ಡಿವೈಎಸ್ಪಿ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಶರಣಪ್ಪ, ನಗರಠಾಣೆಯ ಅಮರ್ ಮೊಗಳಿ, ನಂದಿಗಿರಿಧಾಮದ ಸಬ್ ಇನ್ಸ್ಪೆಕ್ಟರ್ ಹರೀಶ್, ಹಿರಿಯ ಪತ್ರಕರ್ತರಾದ ಸೋಮಶೇಖರ್, ದಯಾಸಾಗರ್, ಬಾಲಕೃಷ್ಣ,ಕೆನಡಿ,, ಜಿಲಾನಿ, ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ಮುಬಾಷಿರ್, ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜ್,ಖಜಾಂಚಿ ಮುದ್ದುಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರೇಗೌಡ ಮತ್ತಿತರರು ಇದ್ದರು.