ರಾಜಕಾರಣ ವೃತ್ತಿಯಲ್ಲ, ಜನರ ಸೇವೆ: ಬೊಮ್ಮಾಯಿ

KannadaprabhaNewsNetwork |  
Published : Jun 28, 2026, 03:15 AM IST
ಯಂಗ್‌ ಇಂಡಿಯನ್‌ ಪಾರ್ಲಿಮೆಂಟ್‌‍- 2026 ಕಾರ್ಯಕ್ರಮವನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಯಾವುದೇ ವೃತ್ತಿ ಇರಲಿ ಅದರಲ್ಲಿ ಸಹಜವಾಗಿ ಲಾಭ-ನಷ್ಟದ ಲೆಕ್ಕಾಚಾರ ಬರುತ್ತದೆ. ರಾಜಕೀಯ ವ್ಯವಹಾರವಲ್ಲ, ಸಮಾಜಕ್ಕೆ ಒಳ್ಳೆಯದು ಮಾಡುವ ಸಾಧನ. ರಾಜಕೀಯದಲ್ಲಿ ಸೇವೆಗೆ ಪ್ರಾಮುಖ್ಯತೆ ಇದೆ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ:

ರಾಜಕೀಯ ವೃತ್ತಿಯಲ್ಲ. ಇದು ಸಾರ್ವಜನಿಕರಿಗೆ ಮಾಡುವ ಸೇವೆ. ಆದರೆ, ಅದು ಕೆಲವರಿಗೆ ವೃತ್ತಿಯಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.ಇಲ್ಲಿನ ಗುಜರಾತ ಭವನದಲ್ಲಿ ಕಾನ್ಫಿಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀ ಹಾಗೂ ಯಂಗ್‌ ಇಂಡಿಯನ್ಸ್‌ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಯಂಗ್‌ ಇಂಡಿಯನ್‌ ಪಾರ್ಲಿಮೆಂಟ್‌‍- 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ವೃತ್ತಿ ಇರಲಿ ಅದರಲ್ಲಿ ಸಹಜವಾಗಿ ಲಾಭ-ನಷ್ಟದ ಲೆಕ್ಕಾಚಾರ ಬರುತ್ತದೆ. ರಾಜಕೀಯ ವ್ಯವಹಾರವಲ್ಲ, ಸಮಾಜಕ್ಕೆ ಒಳ್ಳೆಯದು ಮಾಡುವ ಸಾಧನ. ರಾಜಕೀಯದಲ್ಲಿ ಸೇವೆಗೆ ಪ್ರಾಮುಖ್ಯತೆ ಇದೆ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ರಾಜಕೀಯವನ್ನು ವೃತ್ತಿಯನ್ನಾಗಿಸಿ ಕೊಂಡವರು ಇದ್ದಾರೆ. ಇದು ಅತ್ಯಂತ ಬೇಸರದ ಸಂಗತಿ ಎಂದ ಅವರು, ಅದಕ್ಕಾಗಿ ನಿಮ್ಮದೇ ಸ್ವಂತ ವೃತ್ತಿ ಇಟ್ಟುಕೊಂಡು ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬರಬೇಕು ಎಂದು ಕಿವಿಮಾತು ಹೇಳಿದರು.

ಯುವಕರು ಇಂಟರ್‌ನೆಟ್‌, ಎಐ, ಚಾಟ್‌ ಜಿಪಿಟಿ ಯುಗದಲ್ಲಿದ್ದೀರಿ. ಆದರೆ, ಚಾಟ್‌ ಜಿಪಿಟಿಯ ಗುಲಾಮರಾಗಬೇಡಿ. ನಿಮ್ಮ ಸ್ವಂತ ಆಲೋಚನೆಯೇ ಮುಖ್ಯವಾಗಿದ್ದು ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯವಾಗಲಿದೆ ಎಂದು ಹೇಳಿದರು. ನಾನು ಎಂಜಿನಿಯರ್‌ ಪದವೀಧರನಾಗಿ ಇಂದಿಗೂ ನನ್ನ ಕೆಲಸ ನಾನೇ ಮಾಡುತ್ತೇನೆ. ನಾನು ಮೂರು ದಶಕಗಳಿಂದಲೂ ರಾಜಕೀಯದಲ್ಲಿದ್ದರೂ ಅದು ನನ್ನ ವೃತ್ತಿಯಾಗಿಲ್ಲ. ವೃತ್ತಿಯಾಗಲು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.

ಉದ್ಯಮಿಗಳು ರಾಜಕೀಯಕ್ಕೆ ಬರುವುದು ಅಪಾಯವಲ್ಲ, ರಾಜಕಾರಣಿಗಳು ಉದ್ಯಮಿಗಳಾಗುವುದು ದೊಡ್ಡ ಅಪಾಯ. ನ್ಯಾಯ, ಸಮಾನತೆ, ಸಾಮಾಜಿಕ ನ್ಯಾಯ, ದೇಶಪ್ರೇಮವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದ ಅವರು, ಯಾವುದೇ ಕಾರಣಕ್ಕೂ ಮಾತೃಭೂಮಿಯನ್ನು ದೂಷಿಸಬಾರದು. ಏಕೆಂದರೆ, ನೀವು ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಈ ದೇಶದ್ದಾಗಿದೆ. `ಆತ್ಮನಿರ್ಭರ'''''''' ದೇಶವೇ ಸ್ವಾಭಿಮಾನದ ದೇಶ ಎಂದರು.ಪ್ರಜಾಪ್ರಭುತ್ವವು ಎಲ್ಲರಿಗೂ ಸಮಾನತೆ, ನ್ಯಾಯ ಮತ್ತು ಅವಕಾಶಗಳನ್ನು ನೀಡುತ್ತದೆ. ಹಾಗಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು ಅನಿವಾರ್ಯ ಎಂದ ಅವರು, ಯಾವುದೇ ಸಂಸದೀಯ ವ್ಯವಸ್ಥೆ ಆ ದೇಶದ ಸಂಸ್ಕೃತಿಯಲ್ಲಿ ಬೇರೂರಿರುತ್ತದೆ. ಅದಕ್ಕಾಗಿಯೇ ಅಮೆರಿಕ, ಫ್ರಾನ್ಸ್‌, ಇಟಲಿಗಳಿಗಿಂತ ಭಾರತದ ಪ್ರಜಾಪ್ರಭುತ್ವ ಭಿನ್ನವಾಗಿದೆ. ನಮ್ಮ ಸಂಸ್ಕೃತಿಯೇ ನಮ್ಮ ರಾಜಕೀಯವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.ಸಂಸದರು ಎಂದರೆ `ಸೂಪರ್‌ ನಾಗರಿಕರಲ್ಲ'''''''', ಅವರೂ ಸಾಮಾನ್ಯರಲ್ಲಿ ಒಬ್ಬರು. ಸಂಸದನಿಗೆ ಸಿಕ್ಕಿದ್ದು ಸೌಲಭ್ಯವಲ್ಲ, ಜವಾಬ್ದಾರಿ. ಪ್ರಜಾಪ್ರಭುತ್ವಕ್ಕೆ ಸವಾಲು ಬಂದಾಗ, ಅನ್ಯಾಯದ ವಿರುದ್ಧ ಎದ್ದು ನಿಲ್ಲಬೇಕು ಎಂದರುಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ ಜೋಶಿ, ಡಾ. ಸಮೀರ್‌ ಮಂಗಲವೇದೆ, ಡಾ. ದೀಪ್ತಿ ಎಸ್‌. ಜೋಶಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರಂಡಿ ಸಮಸ್ಯೆಗೆ ರಸ್ತೆ ತಡೆ ಪ್ರತಿಭಟನೆ
ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ತಪಾಸಣೆ ನಡೆಸಿದ ಪೊಲೀಸರು