ಇಂದು ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರ ಮತದಾನ

KannadaprabhaNewsNetwork | Published : Jun 3, 2024 12:30 AM
Follow Us

ಸಾರಾಂಶ

ಮತದಾನ ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಜೂ.6 ರಂದು ಮತಗಳ ಎಣಿಕೆ ಮೈಸೂರಿನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಮತ್ತು ಉಡುಪಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಐದೂವರೆ ಜಿಲ್ಲೆಗಳನ್ನು ಒಳಗೊಂಡ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ಸವಾಲಾಗಿ ಪರಿಣಮಿಸಿದೆ.

ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಮೊಗ್ಗದ ಡಾ.ಧನಂಜಯ ಸರ್ಜಿ, ಕಾಂಗ್ರೆಸ್‌ನಿಂದ ಶಿವಮೊಗ್ಗದ ಆಯನೂರು ಮಂಜುನಾಥ್‌, ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ, ಹಾಲಿ ಪರಿಷತ್‌ ಸದಸ್ಯ ಭೋಜೇ ಗೌಡ, ಕಾಂಗ್ರೆಸ್‌ನಿಂದ ಡಾ.ಮಂಜುನಾಥ್‌ ಸ್ಪರ್ಧಿಸುತ್ತಿದ್ದಾರೆ.

ಬಂಡಾಯ ಸವಾಲು: ಈ ಎರಡೂ ಕ್ಷೇತ್ರಗಳಲ್ಲೂ ಕರಾವಳಿಯಲ್ಲಿ ಟಿಕೆಟ್‌ ವಂಚಿತರು ಬಂಡಾಯವಾಗಿ ಪಕ್ಷೇತರ ಸ್ಪರ್ಧೆಗೆ ಇಳಿದಿದ್ದಾರೆ.

ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ವಂಚಿತ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್‌ ಬಂಡಾಯ ಸ್ಪರ್ಧಿಸುತ್ತಿದ್ದಾರೆ. ಪಕ್ಷಾಂತರ ಮಾಡಿದವರಿಗೆ ಟಿಕೆಟ್‌ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್‌ ಬಂಡಾಯ ಎಸ್‌.ಪಿ.ದಿನೇಶ್‌ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಂಗಳೂರು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಹರೀಶ್‌ ಆಚಾರ್ಯ ಪಕ್ಷೇತರನಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಚಿಕ್ಕಮಗಳೂರಿನ ನಂಜೇಶ್‌ ಬೆನ್ನೂರ್‌ ಪಕ್ಷೇತರನಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಕೊಡಗಿನ ಕೆ.ಕೆ.ಮಂಜುನಾಥ್‌ ಎನ್ನುವವರೂ ಪಕ್ಷೇತರನಾಗಿ ಕಣದಲ್ಲಿದ್ದಾರೆ. ಒಟ್ಟು ಮತದಾರರು, ಕಣದಲ್ಲಿರುವವರು: ಪದವೀಧರ ಕ್ಷೇತ್ರದಲ್ಲಿ 85,090 ಮತದಾರರಿದ್ದು, 10 ಮಂದಿ ಕಣದಲ್ಲಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 23,402 ಮಂದಿ ಮತದಾರರಿದ್ದು, 8 ಮಂದಿ ಕಣದಲ್ಲಿದ್ದಾರೆ.

ಮತದಾನ ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಜೂ.6 ರಂದು ಮತಗಳ ಎಣಿಕೆ ಮೈಸೂರಿನಲ್ಲಿ ನಡೆಯಲಿದೆ.

ದ.ಕ.ದಲ್ಲಿ ಮತದಾನ ಕೇಂದ್ರ: ದ.ಕ. ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 16 ಕಡೆಗಳಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಪದವೀಧರ ಕ್ಷೇತ್ರದಲ್ಲಿ 19,971 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 8,189 ಮಂದಿ ಮತದಾರರಿದ್ದಾರೆ.

ಇದು ಬ್ಯಾಲೆಟ್‌ ಪೇಪರ್‌ನಲ್ಲಿ ನಡೆಯುವ ಚುನಾವಣೆಯಾಗಿದೆ. ಇಲ್ಲಿ ಆದ್ಯತೆ ಮೇರೆಗೆ ಮತ ಚಲಾಯಿಸಬೇಕಿದ್ದು, ಪ್ರಥಮ ಪ್ರಾಶಸ್ತ್ಯ ಮತಕ್ಕೆ 1, ಎರಡನೇ ಪ್ರಾಶಸ್ತ್ಯದ ಮತಕ್ಕೆ ಅಭ್ಯರ್ಥಿ ಎದುರು 2 ಎಂದು ನಮೂದಿಸಬೇಕು. ಇಲ್ಲದಿದ್ದರೆ ಅಂತಹ ಮತಗಳು ಅಸಿಂಧುಗೊಳ್ಳುತ್ತವೆ. ಈ ಚುನಾವಣೆಯಲ್ಲಿ ಮತದಾರರ ಬಲಗೈ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಮತದಾನಕ್ಕೆ ಆಗಮಿಸುವಾಗ ಮತದಾರ ನೋಂದಣಿಯ ಸ್ಲಿಪ್‌ ಹಾಗೂ ವೋಟರ್‌ ಐಡಿ ತರಬೇಕಾಗಿದೆ.