ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಜಿಲ್ಲಾದ್ಯಂತ ಪರವಾನಗಿ ಇಲ್ಲದ ನರ್ಸರಿ ಮಾಲೀಕರು ಹಾಗೂ ಕಳಪೆ ಬಿತ್ತನೆ ಟೊಮೆಟೋ ಬೀಜ ವಿತರಣೆ ಮಾಡಿರುವ ಇಸ್ವಾದ್ ೧೦೧ ಕಂಪನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ರೈತರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಪ್ರತಿ ಎಕರೆಗೆ ೩ ಲಕ್ಷ ನಷ್ಟಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ರೋಜಾರನಹಳ್ಳಿ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಕೋಲಾರ-ಶ್ರೀನಿವಾಸಪುರ ಮುಖ್ಯರಸ್ತೆಯ ರೋಜಾರನಹಳ್ಳಿ ಕ್ರಾಸ್‌ನಲ್ಲಿ ಟೊಮೆಟೋವನ್ನು ರಸ್ತೆಗೆ ಸುರಿದು ಬಂದ್ ಮಾಡಲಾಯಿತು. ಹೋರಾಟದ ಸ್ಥಳಕ್ಕೆ ಬಂದ ತೋಟಗಾರಿಕೆ, ಕೃಷಿ ಅಧಿಕಾರಿಗಳ ವಿರುದ್ಧ ನಕಲಿ ಬಿತ್ತನೆ ಬೀಜದಿಂದ ೨೫ ಲಕ್ಷ ನಷ್ಟ ಹೊಂದಿರುವ ರೈತರು ಆಕ್ರೋಶ ವ್ಯಕ್ತಪಡಿಸಿದರು.ಎಕರೆಗೆ ₹3 ಲಕ್ಷ ಪರಿಹಾರ ನೀಡಿ
ಇನ್ನು ೪೮ ಗಂಟೆಯಲ್ಲಿ ಜಿಲ್ಲೆಯ ತೋಟಗಾರಿಕೆ, ಕೃಷಿ ಇಲಾಖೆಯಿಂದ ಇಸ್ವಾದ್ ೧೦೧ ತಳಿಗೆ ಸಂಬಂಧಿಸಿದಂತೆ ನಷ್ಟವಾಗಿರುವ ಬೆಳೆಯ ವರದಿಯನ್ನು ತರಿಸಿಕೊಂಡು ಪರಿಶೀಲನೆ ಮಾಡಿ ಕಂಪನಿ ಪರವಾನಗಿ ರದ್ದು ಮಾಡಬೇಕು ಹಾಗೂ ನಷ್ಟವಾಗಿರುವ ರೈತರಿಗೆ ಕಂಪನಿಯ ಮಾಲೀಕರಿಂದಲೇ ಎಕರೆಗೆ ೩ ಲಕ್ಷದಂತೆ ಪರಿಹಾರ ಕೊಡಿಸಿಕೊಡಬೇಕೆಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಒತ್ತಾಯಿಸಿದರು.ಕ್ರಮ ಕೈಗೊಳ್ಳುವ ಭರವಸೆ
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ನ್ಯಾಯ ದೊರಕಿಸುವ ಜತೆಗೆ ಪರವಾನಗಿ ಇಲ್ಲದ ನರ್ಸರಿ ಹಾಗೂ ನಕಲಿ ಬಿತ್ತನೆ ಬೀಜ, ಕೀಟನಾಶಕ ವಿತರಣೆ ಮಾಡುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತ ಮುಖಂಡರಾದ ಬಂಗವಾದಿ ನಾಗರಾಜಗೌಡ, ತೆರ್‍ನಹಳ್ಳಿ ಆಂಜಿನಪ್ಪ, ಶ್ರೀಕಾಂತ್, ಮಂಜುನಾಥ್, ಈಶ್ವರ್, ರಮೇಶ್, ದರ್ಶನ್, ಅಶ್ವತ್ಥ್, ಚನ್ನೇಗೌಡ, ಮುಕುಂದ, ಚಲಪತಿ, ರಾಜಣ್ಣ, ಚೌಡೇಗೌಡ, ಹೂಹಳ್ಳಿ ಬಾಬು, ನಾರಾಯಣಸ್ವಾಮಿ, ಮತ್ತಿತರರು ಇದ್ದರು.