ತಿಪಟೂರು: ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಕೆಲ ಬಡಾವಣೆಗಳ ರಸ್ತೆಗಳ ಪಕ್ಕದಲ್ಲಿ ವಾಕಿಂಗ್ ಪಾತ್ ನಿರ್ಮಿಸಲು ಕಳಪೆ ಇಂಟರ್‌ಲಾಕ್ ಬ್ರಿಕ್ಸ್ ಅಳವಡಿಸಲಾಗಿದ್ದು, ಇದರಿಂದಾಗಿ ಬ್ರಿಕ್ಸ್‌ಗಳು ಕಿತ್ತು ಹೋಗುತ್ತಿವೆ. ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ನಗರಸಭೆ, ಇಂಜಿನಿಯರಿಂಗ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಕಡೆಗಳಲ್ಲಿ ವಾಕಿಂಗ್ ಪಾತ್ ಚರಂಡಿಯ ಮೇಲೆ ನಿರ್ಮಿಸಿದ್ದು ಅಲ್ಲೇ ತರಕಾರಿ, ಹಣ್ಣು ಸೇರಿದಂತೆ ಇತರೆ ಅಂಗಡಿಗಳವರು ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯ ಮೇಲೂ ಓಡಾಡದೆ ಅತ್ತ ವಾಕಿಂಗ್ ಪಾತ್ ಮೇಲೂ ಓಡಾಡದಂತಾಗಿದೆ.
ಈ ಅವೈಜ್ಞಾನಿಕ ಬ್ರಿಕ್ಸ್ ಕಾಮಗಾರಿಯಿಂದ ಸರ್ಕಾರದ ಲಕ್ಷಾಂತರ ರು. ಹಣ ಖರ್ಚಾಗಿದ್ದು, ಸಾರ್ವಜನಿಕರಿಗೆ, ಪಾದಚಾರಿಗಳಿಗಾಗಲಿ ಅನುಕೂಲವಾಗಿಲ್ಲ. ಅಲ್ಲದೆ ಕೆಲ ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಮತ್ತೆ ಕೆಲವು ಕಡೆಗಳಲ್ಲಿ ಅರ್ಧಕ್ಕೆ ಬಿಡಲಾಗಿದೆ. ನಗರದ ಮುಖ್ಯ ರಸ್ತೆಯಲ್ಲಿ ವಾಕಿಂಗ್ ಪಾತ್ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿದೆ. ವಾಹನ ಸವಾರರು ತಮ್ಮ ವಾಹನ ನಿಲ್ಲಿಸಲೂ ಜಾಗವಿಲ್ಲದೆ ಪರದಾಡುವಂತಾಗಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿಯನ್ನು ಪರಿಶೀಲಿಸಿ ಕಳಪೆ ಕಾಮಗಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಾದಚಾರಿಗಳಿಗೆ ಅನುಕೂಲವಾಗುವಂತ ಗುಣಮಟ್ಟದ ವಾಕಿಂಗ್ ಪಾತ್ ನಿರ್ಮಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ನಗರಸಭೆ ವಿವಿಧ ಅನುದಾನಗಳಡಿಯಲ್ಲಿ ನಗರದ ಫುಟ್‌ಪಾತ್‌ಗೆ ಇಂಟರ್‌ಲಾಕ್ ಬ್ರಿಕ್ಸ್ ಬಳಸಿಕೊಂಡು ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ತರಾತುರಿಯಲ್ಲಿ ಈ ಕಳಪೆ ಕಾಮಗಾರಿ ಮಾಡಲಾಗಿದೆ. ಗುಣಮಟ್ಟವಿಲ್ಲದ ಬ್ರಿಕ್ಸ್ ಬಳಸಿರುವುದರಿಂದ ಕಾಮಗಾರಿ ಸಾಕಷ್ಟು ಕಡೆಗಳಲ್ಲಿ ಹಾಳಾಗಿದ್ದು, ಕೂಡಲೇ ಈ ಬಗ್ಗೆ ಗುಣಮಟ್ಟ ಪರೀಕ್ಷಿಸುವ ಮೇಲಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಅಲ್ಲದೆ ಹಾಳಾಗಿರುವ ಕಡೆ ಸರಿಪಡಿಸಬೇಕು.- ಯೋಗೀಶ್ ಎಂ.ಎಸ್. ನಗರಸಭೆ ಸದಸ್ಯರು, ತಿಪಟೂರು