ಕನ್ನಡಪ್ರಭ ವಾರ್ತೆ ತುಮಕೂರು
ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಬಾಬೂ ಜಗಜೀವನರಾಮ್, ಡಾ.ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹಲವಾರು ವರ್ಷಗಳಿಂದ ಹಮಾಲಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕಾರ್ಮಿಕರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಮಾತನಾಡಿ, ಹಮಾಲರು ಅಕಾಲಿಕವಾಗಿ ಮರಣ ಹೊಂದಿದರೆ ಸಂಘದ ವತಿಯಿಂದ ಗೌರವ ಶ್ರದ್ಧಾಂಜಲಿ ಸಲ್ಲಿಸಿ, ಮೃತರ ಕುಟುಂಬದವರ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳಿ, ಸಂಘದಿಂದ ಸಾಧ್ಯವಾದ ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ, ಆರ್.ಎಂ.ಸಿ ವತಿಯಿಂದ ಅಕಾಲಿಕ ಮರಣ ಹೊಂದಿದ ಹಮಾಲರ ಅಂತ್ಯ ಸಂಸ್ಕಾರ ಕಾರ್ಯಕ್ಕಾಗಿ ಮೃತರ ಕುಟುಂಬಕ್ಕೆ 25 ಸಾವಿರ ರು. ನೆರವು ಹಾಗೂ ಸಕಾಲದಲ್ಲಿ ಎಲ್‌ಐಸಿಯ ವಿಮಾ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ಪ್ರತಿ ವರ್ಷ ಸಂಘದಿಂದ ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಆಚರಣೆ ಮಾಡಿ 60 ವರ್ಷ ಮೇಲ್ಪಟ್ಟ ಸಂಘದ ಸದಸ್ಯರಿಗೆ ಧನ ಸಹಾಯ ಮಾಡಲಾಗುವುದು. ಎಲ್ಲಾ ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಲಹೆ, ಸಹಕಾರ ನೀಡಬೇಕು ಎಂದು ಅಧ್ಯಕ್ಷ ಚಿಕ್ಕಹನುಮಯ್ಯ ಕೋರಿದರು.
ಸಹ ಕಾರ್ಯದರ್ಶಿ ಎಂ.ಡಿ. ರಾಮಚಂದ್ರ ಮಾತನಾಡಿ, ಎಲ್ಲಾ ಹಮಾಲಿಗಳು ತಪ್ಪದೇ ಲೈಸೆನ್ಸ್ ಪಡೆದುಕೊಂಡರೆ ಸಂಘದ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅವಕಾಶವಾಗುತ್ತದೆ. ಎಲ್ಲಾ ಕೂಲಿ ಕಾರ್ಮಿಕರಿಗೂ ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್, ವಿಮಾ ಸೌಲಭ್ಯ ಒದಗಿಸಬೇಕು ಎಂದು ಇಲಾಖೆಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಹಮಾಲಿಗಳಿಗೂ ಇಂತಹ ಸೌಕರ್ಯಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಮೂರ್ತಿ, ಖಜಾಂಚಿ ತರಕಾರಿ ನಾಗರಾಜು, ನಿರ್ದೇಶಕರಾದ ಸಿದ್ದಯ್ಯ, ಎಲ್.ಡಿ.ಕುಂಭಯ್ಯ, ಗೋವಿಂದಯ್ಯ, ಪೂಜಯ್ಯ, ಎಡ್ವಿನ್, ಕುಂಭಯ್ಯ, ನಾಗರಾಜು, ದೊರೆಬಾಬು, ಜಿ.ಎ.ಸೋಮಶೇಖರ್, ನರಸಿಂಹರಾಜು, ಫೈರೋಜ್, ಕೆಂಪಯ್ಯ, ದೇವರಾಜು, ವಸಂತ್, ಕೆಂಪರಾಜು, ಮೆಹಬೂಬ್ ಪಾಷಾ ಮೊದಲಾದವರು ಭಾಗವಹಿಸಿದ್ದರು.