ಮುತ್ತಿನಕೊಪ್ಪದಲ್ಲಿ ಅಂಚೆ ಇಲಾಖೆಯಿಂದ ಅಪಘಾತ ವಿಮಾ ಮೇಳ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರದೇಶದಲ್ಲಿ ಮೊದಲ ಬಾರಿಗೆ ವಿಮೆ ಜಾರಿಗೆ ತಂದ ಕೀರ್ತಿ ಅಂಚೆ ಇಲಾಖೆಗೆ ಸಲ್ಲುತ್ತದೆ ಎಂದು ಅಂಚೆ ಇಲಾಖೆ ಕೊಪ್ಪ ಡಿವಿಜನ್ ತನಿಖಾಧಿಕಾರಿ ಹರಿಪ್ರಸಾದ್ ತಿಳಿಸಿದರು.
ಗುರುವಾರ ಮುತ್ತಿನಕೊಪ್ಪದಲ್ಲಿ ಅಂಚೆ ಕಚೇರಿ ನೂತನ ಕಟ್ಟಡ ಉದ್ಘಾಟನೆ, ಐಪಿಪಿಬಿ ಖಾತೆ ಮತ್ತು ಅಪಘಾತ ವಿಮೆ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಚೆ ಇಲಾಖೆಯಲ್ಲಿ ಹಲವಾರು ಸೌಲಭ್ಯ ಲಭ್ಯವಿದೆ. ಅದನ್ನು ಗ್ರಾಹಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಅಂಚೆ ಕಚೇರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಪಘಾತ ವಿಮೆ ಜನರಿಗೆ ಹೆಚ್ಚು ಉಪಯೋಗವಾಗಲಿದ್ದು ವರ್ಷಕ್ಕೆ ಒಂದು ಕಂತು ಕಟ್ಟಿದರೆ ನೀವು ಅಪಘಾತ ಪಾಲಿಸಿದಾರರಾಗುತ್ತೀರಿ ಎಂದರು.ನಮ್ಮ ಅಂಚೆ ಇಲಾಖೆಯಲ್ಲಿ ಮಹಿಳೆಯರಿಗೆ ಮತ್ತು ಕಿಶೋರಿಯರಿಗೆ ಅನುಕೂಲವಾಗುವಂತೆ ಯೋಜನೆಗಳು ಲಭ್ಯವಿದ್ದು ಸ್ಥಳೀಯ ಅಂಚೆ ಇಲಾಖೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ನಮ್ಮ ಅಂಚೆ ಇಲಾಖೆ ಹಿರಿಯ ನಾಗರಿಕರ ಉಳಿತಾಯ ಖಾತೆಗೆ ಹೆಚ್ಚಿನ ಬಡ್ಡಿ ಸಹ ನೀಡಲಾಗುತ್ತಿದೆ. ಟೆಲಿಗ್ರಾಂ ಕಾಲದಿಂದ ಇಂದಿನ ಆನ್ ಲೈನ್ ವರೆಗೆ ನಮ್ಮ ಅಂಚೆ ಇಲಾಖೆ ಸೇವೆ ಸಲ್ಲಿಸುತ್ತಿದೆ. ನಿಮ್ಮ ಹೆಬ್ಬೆಟ್ಟಿನ ಗುರುತು ನೀಡಿ ನಮ್ಮಲ್ಲಿ ಖಾತೆ ತೆರೆಯಬಹುದು ಎಂದರು. ಮುಖ್ಯ ಅತಿಥಿಯಾಗಿದ್ದ ಮುತ್ತಿನಕೊಪ್ಪ ಗ್ರಾಪಂ ಉಪಾಧ್ಯಕ್ಷ ನರೇಂದ್ರ ಮಾತನಾಡಿ, ಈ ಹಿಂದೆ ನಮ್ಮ ಪಂಚಾಯಿತಿ ಕಟ್ಟಡದಲ್ಲೇ ಅಂಚೆ ಕಚೇರಿ ನಡೆಯುತ್ತಿತ್ತು. ಆ ಕಟ್ಟಡ ತುಂಬಾ ಶಿಥಲವಾಗಿತ್ತು. ಮಳೆ ಗಾಲದಲ್ಲಿ ಗ್ರಾಹಕರು ಪರದಾಡುವ ಸ್ಥಿತಿ ನೋಡಲಾಗದೆ ಪಂಚಾಯಿತಿ ಸದಸ್ಯರ ಒಪ್ಪಿಗೆ ಪಡೆದು ಅಂಚೆ ಕಚೇರಿಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಳೆದ 40 ವರ್ಷಗಳಿಂದ ಮುತ್ತಿನಕೊಪ್ಪದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗೇಶ್ ಎಲ್ಲಾ ಗ್ರಾಹಕರನ್ನು ವಿಶ್ವಾಸಕ್ಕೆ ಪಡೆದು ಇಲಾಖೆಯನ್ನು ಈ ಭಾಗದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮುತ್ತಿನಕೊಪ್ಪ ಅಂಚೆ ಇಲಾಖೆಯಿಂದ ನಿವೃತ್ತ ಯೋಧರು, ಪಿಂಚಣಿದಾರರಿಗೆ ಸನ್ಮಾನಿಸಲಾಯಿತು. ಮುತ್ತಿನಕೊಪ್ಪ ಬ್ರಾಂಚ್ ಪೋಸ್ಟ್ ಮಾಸ್ಟರ್ ನಾಗೇಶ್ ಅವರ ಪ್ರಾಮಾಣಿಕ ಸೇವೆ ಗುರುತಿಸಿ ಸಾರ್ವಜನಿಕರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷೆ ಯನ್ನು ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷ ನೀಲಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರಸಿಂಹರಾಜಪುರ ಪೋಸ್ಟ್ ಮಾಸ್ಟರ್ ಅರುಣಕುಮಾರ್, ಮುತ್ತಿನಕೊಪ್ಪ ಬ್ರಾಂಚ್ ಪೋಸ್ಟ್ ಮಾಸ್ಟರ್ ನಾಗೇಶ್, ಗ್ರಾಪಂ ಸದಸ್ಯರಾದ ಬೆಳ್ಳಪ್ಪ, ಮಹಮದ್ ಫಯಾಜ್ ಆಲಿ, ಪುಷ್ಪ ,ಲಿಸ್ಸಿ, ಮಾಜಿ ಅಧ್ಯಕ್ಷೆ ಜಯಂತಿ, ಮುಖಂಡ ಎಂ.ಬಿ.ವಿಜಯಕೃಷ್ಣ, ಪಿಡಿಓ ಸುಮಿತ್ರ , ಅಭಿನವ ಗಿರಿರಾಜ್ ಇದ್ದರು.