ಕಲ್ಲೇನಹಳ್ಳಿಯಲ್ಲಿ ಅಂಚೆ ಕಚೇರಿ ಆರಂಭ । ಪ್ರತಿ ತಿಂಗಳು ಶಾಖಾ ಕಚೇರಿಗಳಲ್ಲಿ ೯೦ ಕೋಟಿ ರು. ವ್ಯವಹಾರ
ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಚೆ ಕಚೇರಿಗಳು ಬಹು ಜನ ಉಪಯೋಗಿ ಕೆಲಸ ನಿರ್ವಹಿಸುವ ಜೊತೆಗೆ, ಜನಸಾಮಾನ್ಯರಲ್ಲಿ ನಂಬಿಕೆ, ವಿಶ್ವಾಸರ್ಹತೆ ಉಳಿಸಿಕೊಂಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ತಾಲೂಕಿನ ಶಿವನಿ ಹೋಬಳಿಯ ಕಲ್ಲೇನಹಳ್ಳಿ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.ಅಂಚೆ ಕಚೇರಿಯ ಸುಕನ್ಯ ಸಮೃದ್ದಿ ಯೋಜನೆಯಿಂದ ಹೆಣ್ಣು ಭ್ರೂಣ ಹತ್ಯೆಗಳು ಇಳಿಕೆಗೊಂಡಿವೆ. ಅಲ್ಲದೇ ಆಟಲ್ ಮಾಶಾಸನ, ಪ್ರಧಾನ ಮಂತ್ರಿ ಜೀವ ಭೀಮಾ, ಗುಂಪು ಅಪಘಾತ ವಿಮೆ ಯೋಜನೆಗಳು ಅಂಚೆ ಇಲಾಖೆಯಲ್ಲಿ ದೊರಕುತ್ತಿರುವ ಹಿನ್ನೆಲೆ ಗ್ರಾಹಕರು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಅಂಚೆ ಇಲಾಖೆಯ ಸೌಲಭ್ಯ ಸ್ಥಳೀಯರಿಗೆ ಪೂರೈಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಶಾಖಾ ಕಚೇರಿ ತೆರೆಯುವ ಉದ್ದೇಶ ಹೊಂದಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳನ್ನು ಗುರುತಿಸಿ ಶಾಖೆ ತೆರೆಯಲಾಗುವುದು ಎಂದ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಸ್ಥಳೀಯವಾಗಿ ಪಡೆದುಕೊಂಡು ಆರ್ಥಿಕ ಸಬಲರಾಗಬೇಕು ಎಂದು ತಿಳಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರದ ಅನೇಕ ಯೋಜನೆಗಳು ಡಿಬಿಟಿ ಮುಖಾಂತರ ಅಂಚೆ ಕಚೇರಿಯಲ್ಲಿ ವ್ಯವಹರಿಸುತ್ತಿದೆ. ಅಂಚೆ ಇಲಾಖೆ ನೌಕರರು ಹಲವಾರು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ ಕಾರಣ ಇಲಾಖೆಗೆ ಉತ್ತಮ ಹೆಸರು ಬಂದಿದೆ. ಜೊತೆಗೆ ಗಡಿಭಾಗಕ್ಕೆ ಕಚೇರಿ ಸ್ಥಾಪಿತವಾಗಿರುವುದು ಖುಷಿ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಚೆ ನಿರೀಕ್ಷಕ ಎನ್.ರಮೇಶ್, ಕಲ್ಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಚ್ಚನಹಟ್ಟಿ, ದಾಸರಹಳ್ಳಿ, ಭಕ್ತನಕಟ್ಟೆ ಹಾಗೂ ಕಲ್ಲೇನಹಳ್ಳಿ ಜನತೆಯು ತ್ಯಾಗದಕಟ್ಟೆ ಅಂಚೆ ಕಚೇರಿ ವ್ಯಾಪ್ತಿಯಲ್ಲಿದೆ. ತ್ಯಾಗದಕಟ್ಟೆಗೆ ವಾಹನ ಸೌಕರ್ಯವಿಲ್ಲದೆ ಹತ್ತಾರು ಕಿ.ಮೀ. ಸಂಚರಿಸುವುದನ್ನು ಮನಗಂಡು ಕೇಂದ್ರ ಸರ್ಕಾರ ನೂತನ ಶಾಖೆ ಸ್ಥಾಪಿಸಿದೆ ಎಂದು ಹೇಳಿದರು.
ತಾಪಂ ಇಒ ವಿಜಯ್‌ಕುಮಾರ್, ಮಾಜಿ ಶಾಸಕ ಎಸ್.ಎಂ.ನಾಗರಾಜ್, ಕಲ್ಲೇನ ಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಸರೋಜಮ್ಮ, ಪಿಡಿಓ ಕುಮಾರ್, ಮಾಜಿ ಅಧ್ಯಕ್ಷರಾದ ತಿಪ್ಪೇಶಪ್ಪ, ಪುಷ್ಪಾ ಉಪ ಸ್ಥಿತರಿದ್ದರು. ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ಚಂದ್ರಪ್ರಕಾಶ್ ಸ್ವಾಗತಿಸಿದರು. ಲೀಲಾವತಿ ಪ್ರಾ ರ್ಥಿಸಿದರು. ಬಸವರಾಜಪ್ಪ ವಂದಿಸಿದರು.