ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹಾಜರಿದ್ದು, ಇತಿಹಾಸ ಪ್ರಸಿದ್ದ ಪೊಳಲಿ ಕ್ಷೇತ್ರದಲ್ಲಿ ಮುಂದಿನ ತಿಂಗಳು ನಡೆಯುವ ಶತಚಂಡಿಕಾಯಾಗ ಬಳಿಕ ಒಂದು ತಿಂಗಳ ಪರ್ಯಂತ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸೇತುವೆಯ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಯಂತ್ರದ ಮೂಲಕ ಸೇತುವೆ ಮೇಲಕ್ಕೆತ್ತಿ ಅದರ ಅಡಿ ಭಾಗದಲ್ಲಿ ಬೇರಿಂಗ್ ಅಳವಡಿಸುವ ಕೆಲಸ ಆಗಬೇಕಾಗಿದ್ದು, ಇದಕ್ಕೆ 10-15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಇಂಜಿನಿಯರ್‌ಗಳು ಸಚಿವರ ಗಮನಕ್ಕೆ ತಂದರು.
ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು, ಜಿಲ್ಲಾ ಪ್ರವಾಸದಲ್ಲಿರುವ ಲೋಕೋಪಯೋಗಿ ಇಲಾಖಾ ಸಚಿವರು ಪೊಳಲಿ- ಅಡ್ಡೂರು ಸೇತುವೆ ಕಾಮಗಾರಿಯ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರು.
ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರು ಕಲ್ಲಗುಡ್ಡೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಸುವ ಸಂಚಾರ ಗಣತಿ ಕಾರ್ಯದ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿ.ಸಿ.ರೋಡ್ – ಪೊಳಲಿ ರಸ್ತೆಯಲ್ಲಿ 3.3 ಕಿ.ಮೀ.ರಸ್ತೆಯ ಅಭಿವೃದ್ಧಿಗೆ ಸಿಆರ್‌ಎಫ್ ನಿಧಿಯಲ್ಲಿ 2 ಕೋಟಿ ರು. ಅನುದಾನ ಮಂಜೂರುಗೊಂಡು ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ. ಅದೇರೀತಿ ಪಿಡ್ಲ್ಯುಡಿ ಇಲಾಖೆಯ ಯೋಜನೆಯಲ್ಲಿ 4 ಕೋಟಿ ರು.ವಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಾಕಿ ಇರುವ ಟೆಂಡರ್ ಕರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವರು ತಕ್ಷಣ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.