ಕರ್ನಲ್‌ ಸೋಫಿಯಾ ಖುರೇಷಿ ಮನೆ ಧ್ವಂಸ ಎಂದು ಪೋಸ್ಟ್‌!

KannadaprabhaNewsNetwork |  
Published : May 15, 2025, 01:32 AM ISTUpdated : May 15, 2025, 06:19 AM IST
colonel sofia qureshi biography operation sindoor indian army woman hero

ಸಾರಾಂಶ

ಕರ್ನಲ್‌ ಸೋಫಿಯಾ ಖುರೇಷಿಯವರ ಪತಿ ತಾಜುದ್ದೀನ್ ಅವರ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿನ ಮನೆ ಮೇಲೆ ಆರ್‌ಎಸ್‌ಎಸ್‌ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  

 ಬೆಳಗಾವಿ : ಕರ್ನಲ್‌ ಸೋಫಿಯಾ ಖುರೇಷಿಯವರ ಪತಿ ತಾಜುದ್ದೀನ್ ಅವರ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿನ ಮನೆ ಮೇಲೆ ಆರ್‌ಎಸ್‌ಎಸ್‌ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ। ಭೀಮಾಶಂಕರ ಗುಳೇದ, ‘ಇದೊಂದು ಸುಳ್ಳು ಸುದ್ದಿ. ಅವರ ಮನೆ ಮೇಲೆ ಯಾವುದೇ ದಾಳಿ ನಡೆದಿಲ್ಲ’ ಎಂದು ತಿಳಿಸಿದ್ದಾರೆ.

ಅನೀಸ್‌ ಉದ್ದೀನ್‌ ಎಂಬಾತ ತನ್ನ ಎಕ್ಸ್‌ ಖಾತೆಯಲ್ಲಿ, ‘ಸೋಫಿಯಾ ಖುರೇಶಿ ಮತ್ತು ಅವರ ಪುತ್ರ ಸಮೀರ್ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ಮನೆಗೆ ಬೆಂಕಿ ಇಟ್ಟು, ಅವರ ವಿರುದ್ಧ ಘೋಷಣೆ ಕೂಗಲಾಗಿದೆ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಳವಿಲ್ಲ. ಇದು ಹಿಂದುತ್ವದ ರಾಷ್ಟ್ರ. ಆರ್‌ಎಸ್‌ಎಸ್‌ನ ಹಿಟ್‌ ಲಿಸ್ಟ್‌ನಲ್ಲಿ ಸೋಫಿಯಾ ಖುರೇಶಿ ಇದ್ದಾರೆ. ಹೀಗಾಗಿ, ಸುರಕ್ಷತೆಯ ದೃಷ್ಟಿಯಿಂದ ಅವರ ಕುಟುಂಬವನ್ನು ಸ್ಥಳಾಂತರ ಮಾಡಲಾಗಿದೆ’ ಎಂದು ಪೋಸ್ಟ್‌ ಹಾಕಿದ್ದ. ಜೊತೆಗೆ, ಮನೆ ಧ್ವಂಸಗೊಳಿಸಿದ ಭಾವಚಿತ್ರವನ್ನು ಪೋಸ್ಟ್‌ ಮಾಡಿದ್ದ. 

  ಈ ಮಧ್ಯೆ, ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಎಸ್ಪಿ, ಕೆನಡಾದ ಕೋಲಂಬಿಯಾ ನಿವಾಸಿ ಅನೀಸ್‌ ಉದ್ದೀನ್‌ ಎಂಬಾತ ತನ್ನ ಎಕ್ಸ್‌ ಖಾತೆಯಲ್ಲಿ ಕರ್ನಲ್‌ ಸೋಫಿಯಾ ಖುರೇಷಿ ಅವರ ಕೊಣ್ಣೂರಿನ ಮನೆ ಮೇಲೆ ಆರ್‌ಎಸ್‌ಎಸ್‌ ಕಾರ್ಯಕರ್ತರು ದಾಳಿ ನಡೆಸಿ, ಮನೆ ಧ್ವಂಸಗೊಳಿಸಿದ್ದಾರೆ ಎಂದು ಮನೆ ಧ್ವಂಸಗೊಳಿಸಿದ ಭಾವಚಿತ್ರವನ್ನು ಪೋಸ್ಟ್‌ ಮಾಡಿದ್ದ. ಈ ಕುರಿತು ನಮ್ಮ ಸಾಮಾಜಿಕ ಜಾಲತಾಣ ಸಿಬ್ಬಂದಿ ನನ್ನ ಗಮನಕ್ಕೆ ತಂದರು. ನಾನು ಕೂಡ ಅದಕ್ಕೆ ಕಾಮೆಂಟ್‌ ಹಾಕಿ ತಕ್ಷಣವೇ ಈ ಮಾಹಿತಿ ಡಿಲೀಟ್‌ ಮಾಡುವಂತೆ ಸೂಚಿಸಿದ್ದೆ. ನನ್ನ ಕಾಮೆಂಟ್‌ ನೋಡಿದ ಆತ ತಕ್ಷಣವೇ ಪೋಸ್ಟ್‌ ಡಿಲೀಟ್‌ ಮಾಡಿದ ಎಂದು ತಿಳಿಸಿದರು.

ಆತ ವಿದೇಶಿ ಪ್ರಜೆ ಆಗಿರುವುದರಿಂದ ನಾವು ಈ ಪ್ರಕರಣ ಸಂಬಂಧ ಎಫ್‌ಐಆರ್‌ ಮಾಡಿಲ್ಲ. ಸುಳ್ಳು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಈಗಾಗಲೇ ಟ್ವಿಟರ್ ಸಂಸ್ಥೆಗೆ ಲೀಗಲ್ ನೋಟಿಸ್ ಕೊಡಲಾಗಿದೆ. ಆತ ಭಾರತೀಯ ಪ್ರಜೆ ಎಂಬುದು ಗೊತ್ತಾದರೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಖುರೇಷಿ ಮನೆಗೆ ಸೂಕ್ತ ಭದ್ರತೆ ಕಲ್ಪಿಸಲಾಗಿದ್ದು, ಅನಗತ್ಯವಾಗಿ ಸಾರ್ವಜನಿಕರನ್ನು ಭೇಟಿ ಮಾಡದಂತೆ ಕುಟುಂಬಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ