ದಾಬಸ್‍ಪೇಟೆ: ಸುಮಾರು 70 ವರ್ಷಗಳಿಂದ ಸಾರ್ವಜನಿಕರು ಓಡಾಡುತ್ತಿದ್ದ ರಸ್ತೆಯನ್ನು ಅಗೆದು ಖಾಸಗಿ ವ್ಯಕ್ತಿಗಳು ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆಂದು ಆರೋಪಿಸಿ ಕನ್ನಸಂದ್ರ ಸೇರಿದಂತೆ ಸುತ್ತಮುತ್ತಲಿನ ಐದಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಬೇಂದು ಒತ್ತಾಯಿಸಿದರು.
ತುಪ್ಪದಹಳ್ಳಿ, ವಡ್ಡರಹಳ್ಳಿ, ಚಿಕ್ಕನಹಳ್ಳಿ, ಪರ್ವತನಪಾಳ್ಯ ಹಾಗೂ ಕನ್ನಸಂದ್ರ ಗ್ರಾಮಗಳಿಗೆ ಇದೇ ರಸ್ತೆಯಲ್ಲೇ ಓಡಾಡಬೇಕು. ಶಾಲಾ ಕಾಲೇಜಿಗೆ, ಆಸ್ಪತ್ರೆಗೆ ತೆರಳಲು, ಹಾಲು ಉತ್ಪಾದಕರು ಡೇರಿಗೆ ಹಾಲು ಹಾಕಲು ಇದೇ ರಸ್ತೆಯನ್ನು ಬಳಸುತ್ತಿದ್ದು, ಸಾವಿರಾರು ರೈತರಿಗೆ ಈ ರಸ್ತೆ ಅನುಕೂಲವಾಗಿದೆ. ಆದರೆ ಇದೀಗ ರಸ್ತೆಯಲ್ಲಿ ಮನೆ ನಿರ್ಮಿಸುವುದರಿಂದ 5 ಗ್ರಾಮದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಗ್ರಾಮಸ್ಥ ರಾಜಣ್ಣ ಮಾತನಾಡಿ, ರಸ್ತೆಯನ್ನು ಅಗೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇದು ಕಂದಾಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ತಹಸೀಲ್ದಾರ್ ಅವರಿಗೆ ದೂರು ನೀಡಿ ಎನ್ನುತ್ತಾರೆ. ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ್ ಎನ್ನುವವರ ಗಮನಕ್ಕೆ ತಂದಿದ್ದು, ಅವರು ಸಹ ಇದು ಸಿವಿಲ್ ವ್ಯಾಜ್ಯ ನೀವೇ ಬಗೆಹರಿಸಿಕೊಳ್ಳಿ, ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ಹಾರಿಕೆಉತ್ತರ ನೀಡುತ್ತಾರೆ ಎಂದು ತಿಳಿಸಿದರು.ರೈತ ನೀಲಕಂಠಯ್ಯ ಮಾತನಾಡಿ, ಗೊರೂರಿನಲ್ಲಿ ನಾಟಿ ಹಸು ಹಾಲಿನ ಡೇರಿ ಇದ್ದು, ಪರ್ವತನಪಾಳ್ಯ, ಕನ್ನಸಂದ್ರ, ಚಿಕ್ಕನಹಳ್ಳಿ ರೈತರು ಹಾಲನ್ನು ಇದೇ ಡೇರಿಗೆ ಹಾಕುತ್ತಿದ್ದು, ಈಗ ರಸ್ತೆ ಅಗೆದಿರುವುದರಿಂದ ಸುತ್ತು ಬಳಿಸಿಕೊಂಡು ಬಂದು ಡೇರಿಗೆ ಹಾಲು ಹಾಕಬೇಕಾಗುತ್ತಿದೆ. ಅಲ್ಲದೇ ವೇಳೆ ವೃದ್ಧರು, ಮಹಿಳೆಯರು ಗ್ರಾಮಗಳಿಗೆ ಬರಲು ಆಟೋ ಮುಂತಾದ ವಾಹನಗಳಿಗೆ ರಸ್ತೆ ಇಲ್ಲದ ಕಾರಣ ಬಹಳಷ್ಟು ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆಯಲ್ಲಿ ತೋಡಿರುವ ಗುಂಡಿಯನ್ನು ಮುಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪೋಟೋ 5 : ಕನ್ನಸಂದ್ರ ಗ್ರಾಮಕ್ಕೆ ಸಂಪರ್ಕಿ ಕಲ್ಪಿಸುವ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಸುತ್ತಮುತ್ತ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.