ಕನ್ನಡಪ್ರಭ ವಾರ್ತೆ ಪಾಂಡವಪುರ

ಬೇಸಿಗೆ ಶಿಬಿರಗಳು ಮಕ್ಕಳ ಜ್ಞಾನಾರ್ಜನೆಗೆ, ಗುಣಾತ್ಮಕ ಹಾಗೂ ಮೌಲ್ಯಯುತ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಉಪಯುಕ್ತವಾಗಿವೆ ಎಂದು ನಂದಗೋಕುಲ ಕಿಡ್ಸ್ ವರ್ಲ್ಡ್‌ನ ಅಧ್ಯಕ್ಷ ಆರ್.ಎ.ನಾಗಣ್ಣ ತಿಳಿಸಿದರು.

ಪಟ್ಟಣದ ಕೃಷ್ಣನಗರದ ಮೂರನೇ ಹಂತದ ನಂದಗೋಕುಲ ಕಿಡ್ಸ್‌ವರ್ಲ್ಡ್‌ನ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಣಿವು ಬೇಸಿಗೆ ಶಿಬಿರ-ಚಿಣ್ಣರ ಸಂತೆಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ವರ್ಷದಲ್ಲಿ ಬಹುತೇಕ ಮಕ್ಕಳು 4 ಗೋಡೆಗಳ ಮಧ್ಯೆ ಇರುತ್ತಾರೆ. ರಜಾ ದಿನಗಳಲ್ಲಿ ಬೇಸಿಗೆ ಶಿಬಿರಗಳು ಸ್ಫೂರ್ತಿದಾಯಕವಾದ ಅನುಭೂತಿ ನೀಡುತ್ತವೆ ಎಂದರು.

ಮಕ್ಕಳ ಬೌದ್ಧಿಕ ಹಾಗೂ ಮನೋವಿಕಾಸಕ್ಕೆ ಉಪಯುಕ್ತ ಚಟುವಟಿಕೆಗಳನ್ನು ಈ ಶಿಬಿರಗಳಲ್ಲಿ ಆಯೋಜಿಸಿರುವುದರಿಂದ ಮಕ್ಕಳು ಆಸಕ್ತಿಯಿಂದ ಕಲಿಯುತ್ತಾರೆ. ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿಕೊಳ್ಳಲು ಕೂಡ ಇದು ಸಹಕಾರಿಯಾಗಿದೆ ಎಂದರು.

ಯಾವುದೇ ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಭಾರತೀಯ ಜೀವನ ಪದ್ಧತಿ ತಿಳಿದುಕೊಳ್ಳಲು ಚಿಣ್ಣರ ಸಂತೆ ಸಹಕಾರಿ. ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಈಗಿನಿಂದಲೇ ಬೆಳೆಯಬೇಕು. ಅದರ ಅರಿವು ಮತ್ತು ಪ್ರಜ್ಞೆ ಜಾಗೃತಗೊಳ್ಳಲು ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಭಾಗ್ಯಮ್ಮ, ಕಿಡ್ಸ್‌ವರ್ಲ್ಡ್‌ನ ಕಾರ್ಯದರ್ಶಿ ಎನ್.ರಶ್ಮಿ, ಮೀನಾಕ್ಷಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅನುಸೂಯ, ವಿದ್ಯಾ, ಭೂಮಿಕ, ರೂಪ, ಪವಿತ್ರ, ಅನಿತ, ಅವಿನಾಶ್, ಮಂಜಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ಚೆನ್ನೈಗೆ ವರ್ಗಾವಣೆಗೊಂಡ ಕೆ.ರಾಜನ್‌ಗೆ ಜೀವ ವಿಮಾ ಸಿಬ್ಬಂದಿಯಿಂದ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ಭಾರತೀಯ ಜೀವ ವಿಮೆ ನಿಗಮದ ಶಾಖೆಯಲ್ಲಿ 3 ವರ್ಷಗಳ ಕಾಲ ಮುಖ್ಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿ ಚೆನ್ನೈ ಸೇಲ್ಸ್ ಟ್ರೈನಿಂಗ್ ಸೆಂಟರ್‌ನ ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಕೆ.ರಾಜನ್ ಅವರಿಗೆ ಜೀವ ವಿಮೆ ಸಿಬ್ಬಂದಿ ವರ್ಗದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಎಲ್ಐಸಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಮದ್ದೂರು ಶಾಖೆ ರಾಜನ್ ಮಾರ್ಗದರ್ಶನದಲ್ಲಿ 15, 138 ಪಾಲಿಸಿಗಳ ಸಂಗ್ರಹಣೆಯ ಮೂಲಕ 33 ಕೋಟಿಗೂ ಹೆಚ್ಚು ಪ್ರೀಮಿಯಂ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಇವರ ಕಾರ್ಯದಕ್ಷತೆಯಿಂದಾಗಿ ಮೈಸೂರು ವಿಭಾಗದ ಮದ್ದೂರು ಶಾಖೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿಮೆ ಸಲಹೆಗಾರರ ಸಂಘದ ಅಧ್ಯಕ್ಷ ಧನಪಾಲ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.ಕೆ.ರಾಜನ್ ಅವರ 33 ವರ್ಷಗಳ ಸೇವೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಪ್ರತಿನಿಧಿಗಳು, ಸಿಬ್ಬಂದಿ ವರ್ಗ, ಪಾಲಿಸಿದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇವರ ನಿಸ್ವಾರ್ಥ ಸೇವೆ ಚೆನ್ನೈ ಸೇಲ್ಸ್ ಸೆಂಟರ್‌ಗು ಮುಂದುವರೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನೂತನ ಮುಖ್ಯ ಪ್ರಬಂಧಕ ಸ್ವಾಮಿನಾಥನ್, ಉಪ ವ್ಯವಸ್ಥಾಪಕ ಎಂ.ಉದಯ್, ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸಿ.ಎಸ್.ವಾಸು, ಮೈಸೂರು ವಿಭಾಗದ ಮುಖ್ಯ ಜೀವ ವಿಮೆ ಸಲಹೆಗಾರ ರ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತುರಾಜು, ನಿರ್ದೇಶಕರಾದ ತಿರುಮಲೇಶ್, ರಾಮಚಂದ್ರ, ಚೆನ್ನಪ್ಪ ಜಿ, ಕೃಷ್ಣೆಗೌಡ, ಸವಿತಾ, ವಾಣಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.