ಮನುಷ್ಯನಲ್ಲಿರುವ ಆಸೆಗಳು ಅತಿಯಾಸೆಯಾಗಿ ಮಾರ್ಪಟ್ಟು ಪ್ರಪಂಚದಲ್ಲಿ ಯುದ್ಧಭೀತಿ ನಡುವೆ ಮಾನವ ಒದ್ದಾಡುವಂತಾಗಿದೆ. ಪರಿಣಾಮ ಮನೆಗಳಲ್ಲಿ ಮತ್ತೆ ಸೌದೆ ಒಲೆಗಳು ಕಾಣುವಂತಾಗಿದೆ. ತಿನ್ನುವ ಆಹಾರವು ವಿಷವಾಗುತ್ತಿರುವ ಈ ದಿನಗಳಲ್ಲಿ ಕೃಷಿ ಸಂಸ್ಕೃತಿ ವಿಜೃಂಭಿಸಿದರೆ ಮಾತ್ರ ಸಾಮಾಜಿಕ ಶಾಂತಿ ನೆಲೆಸಲು ಸಾಧ್ಯ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಪಂಚದ ಎಲ್ಲ ಸಮಸ್ಯೆಗಳಿಗೂ ಬುದ್ಧ ಮಾರ್ಗ ಒಂದೇ ಪರಿಹಾರ. ಮಕ್ಕಳಿಗೆ ಬುದ್ಧನ ಜೀವನ ಸಾಧನೆ ಪರಿಚಯಿಸುವುದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಯಾಚೇನಹಳ್ಳಿ ಆಶ್ರಮದ ನಾದಾನಂದ ಸ್ವಾಮೀಜಿ ಸಲಹೆ ನೀಡಿದರು.ತಾಲೂಕಿನ ನೇರಲಕೆರೆ ಗ್ರಾಮದ ಬುದ್ಧ ಭಾರತ ಫೌಂಡೇಶನ್‌ನ ಬುದ್ಧ ಮಂದಿರದಲ್ಲಿ ಆಯೋಜಿಸಿದ್ದ ಬುದ್ಧ ಜಯಂತಿಯಲ್ಲಿ ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ವೈಜ್ಞಾನಿಕವಾದ ಬದುಕನ್ನು ತಿಳಿಸಿದ ಬುದ್ಧನು ಮಾನವನ ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಪ್ರಪಂಚಕ್ಕೆ ಸಾರಿದರು ಎಂದರು.
ಮನುಷ್ಯನಲ್ಲಿರುವ ಆಸೆಗಳು ಅತಿಯಾಸೆಯಾಗಿ ಮಾರ್ಪಟ್ಟು ಪ್ರಪಂಚದಲ್ಲಿ ಯುದ್ಧಭೀತಿ ನಡುವೆ ಮಾನವ ಒದ್ದಾಡುವಂತಾಗಿದೆ. ಪರಿಣಾಮ ಮನೆಗಳಲ್ಲಿ ಮತ್ತೆ ಸೌದೆ ಒಲೆಗಳು ಕಾಣುವಂತಾಗಿದೆ. ತಿನ್ನುವ ಆಹಾರವು ವಿಷವಾಗುತ್ತಿರುವ ಈ ದಿನಗಳಲ್ಲಿ ಕೃಷಿ ಸಂಸ್ಕೃತಿ ವಿಜೃಂಭಿಸಿದರೆ ಮಾತ್ರ ಸಾಮಾಜಿಕ ಶಾಂತಿ ನೆಲೆಸಲು ಸಾಧ್ಯ ಎಂದರು.ಹೋಮ ಯಜ್ಞಾಧಿಗಳಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಮಳೆಯೂ ಬರುವುದಿಲ್ಲ. ವೈದಿಕ ಶಾಹಿ ವರ್ಣ ವ್ಯವಸ್ಥೆಯಿಂದ ಸಮಾಜ ಜಾತಿ ಸಂಕೋಲೆಗೆ ಸಿಲುಕಿದೆ. ಇದರಿಂದ ಹೊರಬರಲು ಬುದ್ಧನ ಮಾರ್ಗ ಅನುಸರಿಸಬೇಕಿದೆ ಎಂದರು.
ಬುದ್ಧ ಭಾರತ ಫೌಂಡೇಶನ್ ಅಧ್ಯಕ್ಷ ಜಯರಾಮಯ್ಯ ಮಾತನಾಡಿ, ನೇರಳೆಕೆರೆಯಂತಹ ಗ್ರಾಮದಲ್ಲಿ ಭವಿಷ್ಯದ ಪ್ರಜೆಗಳನ್ನು ಉತ್ತಮವಾಗಿ ರೂಪಿಸಬೇಕೆಂಬ ಆಶಯದಿಂದ ಈ ಒಂದು ಜ್ಞಾನ ಮಂದಿರವನ್ನು ನಿರ್ಮಿಸಿದ್ದಾರೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.ಮಂಡ್ಯದ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, 2500 ವರ್ಷಗಳ ಹಿಂದೆ ಇಡೀ ಪ್ರಪಂಚಕ್ಕೆ ದೊಡ್ಡ ಸಂದೇಶ ನೀಡಿದ ಭಗವಾನ್ ಬುದ್ಧರು ಸಮಾಜದಲ್ಲಿರುವ ರೋಗ, ವೃದ್ಧಾಪ್ಯ, ಸಾವು, ನೋವುಗಳ ಬಗ್ಗೆ ಚಿಂತಿಸಿ ದುಃಖ ನಿವಾರಣೆಗೆ ಅಷ್ಟಾಂಗ ಮಾರ್ಗಗಳನ್ನು ತಿಳಿಸಿಕೊಟ್ಟರು ಎಂದರು.
ಯುವಶಕ್ತಿ ಬುದ್ಧರ ಚಿಂತನೆಗಳನ್ನು ಓದಿ ತಿಳಿದುಕೊಳ್ಳಬೇಕಿದೆ. ಓದುವ ಕಡೆ ಮುಖ ಮಾಡಬೇಕಾದ ಅಗತ್ಯವಿದ್ದು, ಬುದ್ಧನನ್ನು ತಿಳಿದರೆ ನಮ್ಮ ಬಹುತೇಕ ಸಮಸ್ಯೆಗಳು ಪರಿಹಾರವಾದಂತೆ, ಮಾತ್ರವಲ್ಲ ಸಮ ಸಮಾಜ ನಿರ್ಮಾಣಕ್ಕೆ ಬುದ್ಧನ ವಿಚಾರಗಳೇ, ಭದ್ರಬುನಾದಿ ಎಂದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಸತೀಶ್, ಎಸ್.ಕೆ.ರಾಜುಗೌಡ, ಕೇಂದ್ರೀಯ ನವೋದಯ ವಿದ್ಯಾಲಯ ಸಮಿತಿ ಸದಸ್ಯ ಮೋಹನ್‌ಕುಮಾರ್, ಬುದ್ಧ ಭಾರತ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜೆ.ರಾಮಯ್ಯ, ಶಶಿರೇಖಾ ಬಿ. ಮತ್ತಿತರರು ಪಾಲ್ಗೊಂಡಿದ್ದರು.