ಆಡಳಿತ ಪಕ್ಷದ ಶಾಸಕರಿದ್ದರೂ ರಸ್ತೆಗಳಲ್ಲಿ ಗುಂಡಿ

KannadaprabhaNewsNetwork |  
Published : Dec 07, 2025, 02:30 AM IST
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸರ್ಕಾರ ವಿರುದ್ದ ಬಿಜೆಪಿ ಪಕ್ಷದಿಂದ ಶೃಂಗೇರಿ ಕ್ಷೇತ್ರದ ಮಟ್ಟದ ಪ್ರತಿಭಟನೆ ನಡೆಯಿತು.ಮಾಜಿ ಸಚಿವ ಡಿ.ಎನ್.ಜೀವರಾಜ್ ಹಾಗೂ ಇತರ ಬಿಜೆಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ಶಾಸಕರಿದ್ದರೂ ರಸ್ತೆಗಳು ಅತ್ಯುತ್ತಮವಾಗಿವೆ. ಯಾವುದೇ ಹೊಂಡ ಗುಂಡಿಗಳಿಲ್ಲ. ಆದರೆ, ಶೃಂಗೇರಿ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರಿದ್ದರೂ ರಸ್ತೆಗಳು ಹೊಂಡ, ಗುಂಡಿಯಿಂದ ತುಂಬಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಟೀಕಿಸಿದರು.

ನರಸಿಂಹರಾಜಪುರ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ಶಾಸಕರಿದ್ದರೂ ರಸ್ತೆಗಳು ಅತ್ಯುತ್ತಮವಾಗಿವೆ. ಯಾವುದೇ ಹೊಂಡ ಗುಂಡಿಗಳಿಲ್ಲ. ಆದರೆ, ಶೃಂಗೇರಿ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರಿದ್ದರೂ ರಸ್ತೆಗಳು ಹೊಂಡ, ಗುಂಡಿಯಿಂದ ತುಂಬಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಟೀಕಿಸಿದರು.

ಶನಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ಶೃಂಗೇರಿ ಕ್ಷೇತ್ರದಮಟ್ಟದ ಸರ್ಕಾರದ ರೈತ ವಿರೋಧಿ ನಿಲುವು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ನಾನು ಶಾಸಕನಾಗಿದ್ದಾಗ ಶೃಂಗೇರಿ ಕ್ಷೇತ್ರದಲ್ಲಿ ರಸ್ತೆಗಳು ತುಂಬಾ ಚೆನ್ನಾಗಿದ್ದವು. ಶೃಂಗೇರಿ ಕ್ಷೇತ್ರದ ಉತ್ತಮ ಗುಣಮಟ್ಟದ ರಸ್ತೆಯ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ಈಗ ರಸ್ತೆಗಳು ತುಂಬಾ ಹದಗೆಟ್ಟಿವೆ. ಅತಿ ಮಳೆಯಿಂದ ರಸ್ತೆ ಹಾಳಾಗಿದೆ ಎಂದು ಶಾಸಕರು ಉತ್ತರ ನೀಡುತ್ತಾರೆ. ಆದರೆ, ನಾನು ಮಾಡಿಸಿದ್ದ ಯಾವುದೇ ರಸ್ತೆ ಇದುವರೆಗೂ ಹಾಳಾಗಿಲ್ಲ. ಈಗಿನ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಈಗ ರಸ್ತೆಯ ಹೊಂಡ, ಗುಂಡಿ ಮುಚ್ಚುತ್ತಿದ್ದು ಅದೂ ಸಹ ಕಳಪೆಯಾಗಿದೆ. ಮತ್ತೆ ಹೊಂಡ ಬೀಳುತ್ತದೆ ಎಂದು ದೂರಿದರು.

ಶೃಂಗೇರಿ ಕ್ಷೇತ್ರವನ್ನು ಈ ಬಾರಿ ಅತಿ ವೃಷ್ಠಿ ಕ್ಷೇತ್ರ ಎಂದು ಘೋಷಣೆ ಮಾಡಿದ್ದರೆ ರೈತರು ಕಟ್ಟಿದ್ದ ವಿಮೆಗೆ ಪರಿಹಾರ ಸಿಗುತ್ತಿತ್ತು. ಅತಿ ವೃಷ್ಠಿ ಎಂದು ಘೋಷಣೆ ಮಾಡಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಸುವರ್ಣ ಭೂಮಿ ಯೋಜನೆಡಿ 10 ಸಾವಿರ ರುಪಾಯಿ ರೈತರಿಗೆ ನೀಡಿದ್ದರು. 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ 7 ಲಕ್ಷ ಮನೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4 ಲಕ್ಷ 17 ಸಾವಿರ ಕೋಟಿ ರುಪಾಯಿ ಬಜೆಟ್ ಮಂಡಿಸಿದ್ದರೂ, ಕೇವಲ 547 ಮನೆ ಮಾತ್ರ ನೀಡಿದ್ದಾರೆ. ಈಗ ಗಂಗಾ ಕಲ್ಯಾಣ ಯೋಜನೆ ಇಲ್ಲ. ಸ್ವಾಂಪ್ ಪೇಪರ್, ಎಣ್ಣೆ ಬೆಲೆ ಗಗನಕ್ಕೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಶಾಸಕನಾಗಿದ್ದಾಗ ಶೃಂಗೇರಿ ಕ್ಷೇತ್ರದಲ್ಲಿ ಜಾತಿ, ಧರ್ಮ, ಪಕ್ಷ ನೋಡದೆ 2766 ಜನರಿಗೆ ಸಾಗುವಳಿ ಚೀಟಿ ನೀಡಿದ್ದೆ. ಎಲ್ಲವೂ ಕಂದಾಯ ಭೂಮಿಯೇ ಆಗಿತ್ತು. ಆದರೆ, ಈಗಿನ ಶಾಸಕರಿಗೆ ನಾನು ಸಾಗುವಳಿ ಚೀಟಿ ನೀಡಿದ ರೈತರಿಗೆ ಪಹಣಿ ಮಾಡಿಸಿ ಕೊಡಲು ಆಗಲಿಲ್ಲ. ಕಾಡಾನೆ ದಾಳಿಯಿಂದ ಶೃಂಗೇರಿ ಕ್ಷೇತ್ರದಲ್ಲಿ ಇದುವರೆಗೆ 8 ಜನರು ಬಲಿಯಾಗಿದ್ದಾರೆ. ಕಾಡು ಕೋಣ ಹಾಗೂ ಹುಲಿಯಿಂದ 3 ಜನ ಸೇರಿ ಒಟ್ಟು 11 ಜನರು ಬಲಿಯಾಗಿದ್ದಾರೆ. ಕಾಡಾನೆ ನಾಡಿಗೆ ಬಾರದಂತೆ ರೇಲ್ವೆ ಬ್ಯಾರಿಕೇಡ್ ಮಾಡಿಸಲು ನಾನು 100 ಕೋಟಿ ರುಪಾಯಿ ಮಂಜೂರು ಮಾಡಿಸಿಕೊಟ್ಟಿದ್ದೆ. ಇದುವರೆಗೂ ರೇಲ್ವೆ ಬ್ಯಾರಿಕೇಡ್ ಆಗಿಲ್ಲ. ಮುತ್ತಿನಕೊಪ್ಪದಿಂದ ಬಾಳೆಹೊನ್ನೂರಿನವರೆಗೆ ಭದ್ರಾ ನದಿಯ ತಟದಲ್ಲಿ ರೇಲ್ವೆ ಬ್ಯಾರಿಕ್ಯಾಡ್ ಮಾಡಿಸಿದರೆ ಕಾಡಾನೆ ಕಾಟ ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ, ರಾಜ್ಯ ಸರ್ಕಾರವು ಕಳೆದ 2.50 ವರ್ಷಗಳಿಂದಲೂ ರೈತರ, ದಲಿತರ, ಹಿಂದೂಗಳ ವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ವಿರೋಧಿಸಿ ಡಿ.8ರಂದು ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಹಾಗೂ ರೈತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಪರಿಷತ್ ಸದಸ್ಯ ಅರುಣ ಕುಮಾರ್ ಮಾತನಾಡಿ, ಈ ವರ್ಷ ಅತಿಯಾದ ಮಳೆಗಾಲದಿಂದಾಗಿ ರೈತರ ಫಸಲು ಹಾಳಾಗಿದೆ. ಆದರೆ, ಅತಿವೃಷ್ಠಿ ಪರಿಹಾರ ನೀಡಿಲ್ಲ. ಕಾಡಾನೆಗಳ ದಾಳಿಯಿಂದ ರೈತರು ಭಯ ಭೀತರಾಗಿದ್ದಾರೆ. ಶಾಶ್ವತ ಪರಿಹಾರ ಆಗಿಲ್ಲ ಎಂದರು.

ಬಿಜೆಪಿ ಕೊಪ್ಪ ತಾಲೂಕು ಅಧ್ಯಕ್ಷ ಹೊಸೂರು ದಿನೇಶ್ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತ ಬಜೆಟ್ ಮಂಡಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಕಾಂಗ್ರೆಸ್ ಪಕ್ಷದವರು ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ. ಶಾಸಕರ ಖರೀದಿ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನೀಲೇಶ್, ಬಿಜೆಪಿ ವಕ್ತಾರ ಎನ್.ಎಂ.ಕಾಂತರಾಜ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ಕೊಪ್ಪ, ಬಿಜೆಪಿ ಪಕ್ಷದ ಮುಖಂಡರಾದ ಶೆಟ್ಟಿಗದ್ದೆ ರಾಮಸ್ವಾಮಿ, ಕೆಸವಿ ಮಂಜುನಾಥ್, ಎಚ್.ಡಿ.ಲೋಕೇಶ್, ಎ.ಬಿ.ಮಂಜುನಾಥ್, ಪರ್ವೀಜ್, ಸುರಭಿ ರಾಜೇಂದ್ರ, ಎಚ್.ಇ.ದಿವಾಕರ, ಕೋಕಿಲಮ್ಮ, ರಾಜೇಶ್, ಅಶ್ವನ್, ನೂತನ್ ಕುಮಾರ್, ಸುರೇಶ್, ಶ್ರೀನಾಥ್ ಮತ್ತಿತರರು ಪಾಲ್ಗೊಂಡಿದ್ದರು.

ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಅರ್ಪಿಸಲಾಯಿತು. ಇದಕ್ಕೂ ಮೊದಲು ಬಿಜೆಪಿ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ