- ಕಂದಾಯ- ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶಾಂತನಗೌಡ ಶ್ಲಾಘನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಮ್ಮ ಇಲಾಖೆಯಲ್ಲಿ ಕ್ರಾಂತಿಯನ್ನೇ ಮಾಡಿ, ರೈತರಿಗೆ ಆಗುತ್ತಿದ್ದ ಹಲವಾರು ತೊಂದರೆಗಳನ್ನು ನಿವಾರಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಚುರುಕು ಮುಟ್ಟಿಸಿ ಇಲಾಖೆ ಕೆಲಸಗಳಿಗೆ ಮತ್ತಷ್ಟು ವೇಗ ನೀಡಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.ಹೊನ್ನಾಳಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ಜಂಟಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಸಾರ್ವಜನಿಕರು ಹಾಗೂ ರೈತರನ್ನು ಅನಗತ್ಯವಾಗಿ ಅಲೆದಾಡಿಸುವ ವಿಷಯ ಗೊತ್ತಾದರೆ ಅಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಮ್ಮ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಸರ್ಕಾರದ ಯಾವುದೇ ಸೌಲಭ್ಯಗಳಿರಲಿ ಅವುಗಳನ್ನು ತಕ್ಷಣ ಅರ್ಹರಿಗೆ ತಲುಪುವಂತೆ ಗಮನಹರಿಸುತ್ತಿದೆ ಎಂದರು.ಕಂದಾಯ ಇಲಾಖೆಯಲ್ಲಿ ದರಖಾಸ್ತು ಪೋಡಿ, ಪೌತಿಖಾತೆ, ಕಂದಾಯ ಗ್ರಾಮ, 94ಸಿ, ಫಾರಂ ನಂ.50 ಹಾಗೂ 53 ಅಡಿಯಲ್ಲಿ ಬರುವ ಬಗರ್‌ಹುಕುಂ ಅರ್ಜಿಗಳ ವಿಲೇವಾರಿ ಮಾಡಿ. ಯಾವುದೇ ರೈತ ಕಂದಾಯ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ನಮ್ಮ ಸರ್ಕಾರ ಮಾಡಿದೆ. ಅದೇ ರೀತಿ ನೀವು ಸಹ ರೈತರಿಗೆ ಕಚೇರಿಗೆ ಅಲೆಯದಂತೆ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಬೇಕು. ಕಾನೂನು ಅಡಿಯಲ್ಲಿ ಆಗದಿದ್ದರೆ ತಕ್ಷಣ ಅವರಿಗೆ ತಿಳಿಸಿ, ಹಿಂಬರ ನೀಡಿ. ಆದರೆ, ಅಲೆದಾಡಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಶೀಘ್ರವೇ ಕಂದಾಯ ಇಲಾಖೆಗೆ ಸೇರಬೇಕಾದ ಭೂಮಿಯನ್ನು ಅರಣ್ಯ ಇಲಾಖೆ ಬಿಟ್ಟುಕೊಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಖುದ್ದು ಹಾಜರಿದ್ದು ಸರ್ವೆಗೆ ಮುಂದಾಗಬೇಕು. ಇಲ್ಲದಿದ್ದರೆ ರೈತರಿಗೆ ತುಂಬಾ ಅನಾನುಕೂಲ ಆಗುತ್ತದೆ. ತಡ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಕೆರೆ ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡುವುದಕ್ಕಾಗಿ ಕೆರೆ ಸಂರಕ್ಷಣೆ ಪ್ರಾಧಿಕಾರ ರಚನೆ ಮಾಡಿದ ಮೊದಲ ಸರ್ಕಾರ ನಮ್ಮದು. ಯಾರ ಮುಲಾಜಿಗೂ ಒಳಗಾಗದೇ ಕೆರೆ ಒತ್ತುವರಿ ತೆರವು ಮಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನಮ್ಮ ಸರ್ಕಾರ ಪಾಲಿಸಿದೆ ಎಂದ ಅವರು, ಪ್ರತಿ ಶನಿವಾರ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮಗಳನ್ನು ಮಾಡಿದೆ. 30 ತಿಂಗಳಲ್ಲಿ ಸುಮಾರು 1.40 ಲಕ್ಷ ವಿವಿಧ ಅರ್ಜಿಗಳನ್ನು ವಿವೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್, ನ್ಯಾಮತಿ ತಹಸೀಲ್ದಾರ್ ಕವಿರಾಜ್, ಡಿಎಫ್‌ಒ ಹರ್ಷವರ್ಧನ್, ಹೊನ್ನಾಳಿ, ಆರ್‌ಎಫ್‌ಒ ಕಿಶೋರ್ ನಾಯ್ಕ್, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಇತರರು ಇದ್ದರು.- - -
-6ಎಚ್.ಎಲ್ಐ3:ಹೊನ್ನಾಳಿ ಎಸಿ ಕಚೇರಿಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ಜಂಟಿಸಭೆ ನಡೆಸಿದರು. ಹೊನ್ನಾಳಿ ಉಪವಿಭಾಗಾಧಿಕಾರಿ, ತಹಸೀಲ್ದಾರ್, ನ್ಯಾಮತಿ ತಹಸೀಲ್ದಾರ್, ಡಿಎಫ್‌ಒ, ಹೊನ್ನಾಳಿ ಆರ್‌ಎಫ್‌ಒ, ಪುರಸಭೆ ಮುಖ್ಯಾಧಿಕಾರಿ ಇತರರು ಇದ್ದರು.