ಧಾರವಾಡದಲ್ಲಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಬೀದಿನಾಯಿಗಳ ಹಾವಳಿ ತೀವ್ರವಾಗಿದೆ. ನಿತ್ಯವೂ ಒಂದಿಲ್ಲೊಂದು ಸ್ಥಳದಲ್ಲಿ ಬೀದಿನಾಯಿಗಳಿಂದ ಅನಾಹುತಗಳಾಗುತ್ತಿವೆ.
ಧಾರವಾಡ:
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಬೀದಿನಾಯಿಗಳ ಹಾವಳಿ ತೀವ್ರವಾಗಿದೆ. ನಿತ್ಯವೂ ಒಂದಿಲ್ಲೊಂದು ಸ್ಥಳದಲ್ಲಿ ಬೀದಿನಾಯಿಗಳಿಂದ ಅನಾಹುತಗಳಾಗುತ್ತಿದ್ದು, ಬುಧವಾರ ಕೃಷಿ ವಿವಿ ಬಳಿಯ ಶಿರಡಿ ಬಡಾವಣೆಯಲ್ಲಿ ಬೀದಿ ನಾಯಿಯೊಂದಕ್ಕೆ ಹುಚ್ಚು ಹಿಡಿದು ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದೆ.ಶಾಲಾ ಬಾಲಕ ಸೇರಿದಂತೆ ಒಂಭತ್ತು ಜನರಿಗೆ ಹುಚ್ಚು ನಾಯಿ ಕಚ್ಚಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡ ಶೀತಲ್ ಕಬಾಡಿ, ಗಂಗವ್ವ ಉಪ್ಪಾರ ಹಾಗೂ ಲಕ್ಷ್ಮೀ ಮಾದರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಚ್ಚು ನಾಯಿ ದಾಳಿಗೆ ದಂಗಾದ ಸ್ಥಳೀಯರು ಅದನ್ನು ಬೆನ್ನಟ್ಟಿದ್ದು, ತಪ್ಪಿಸಿಕೊಂಡಿತ್ತು.
ಬೆಳಗ್ಗೆಯಿಂದ ಸ್ಥಳೀಯರು ಹುಚ್ಚು ನಾಯಿಗಾಗಿ ಹುಡುಕಾಟ ನಡೆಸಿದ್ದು, ಸುತ್ತಲಿನ ಬಡಾವಣೆ ಜನರು ಸಹ ಆತಂಕಗೊಂಡಿದ್ದರು. ಮಧ್ಯಾಹ್ನದ ಹೊತ್ತಿಗೆ ಆ ನಾಯಿ ಮತ್ತೆ ಬಡಾವಣೆಗೆ ಬಂದು ಅದೇ ಬಡಾವಣೆಯ ರಿಶಿಕ್ ಎಂಬ ಐದು ವರ್ಷದ ಶಾಲಾ ಬಾಲಕನ ಮೇಲೆ ದಾಳಿ ಮಾಡಿದೆ. ಕಿವಿ, ಬೆನ್ನಿಗೆ ಕಚ್ಚಿದೆ. ಇದರಿಂದಾಗಿ ಆಕ್ರೋಶಗೊಂಡ ಸ್ಥಳೀಯರು ನಾಯಿಗೆ ಕಲ್ಲೆಸೆದು ಕೊಂದು ಹಾಕಿದ್ದಾರೆ.ಶಿರಡಿ ನಗರ ಹು-ಧಾ ಮಹಾನಗರ ಪಾಲಿಕೆ ಹಾಗೂ ಚಿಕ್ಕಮಲ್ಲಿಗವಾಡ ಗ್ರಾಪಂನ ಗಡಿಗೆ ಇದ್ದು, ಎರಡೂ ಸಂಸ್ಥೆಗಳು ನನಗೆ ಸಂಬಂಧಿಸಿದ್ದಲ್ಲ ಎಂದು ಈ ಪ್ರದೇಶದಲ್ಲಿ ಬೀದಿ ನಾಯಿ, ಬಿಡಾಡಿ ದನ ನಿಯಂತ್ರಣ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಹಿಂದೇಟು ಹಾಕುವಂತಾಗಿದೆ.