ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ನವ ಮತದಾರರಾದ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶಶಿಧರ ಶೆಟ್ಟಿ ಮಾತನಾಡಿ, ಒಬ್ಬ ಭಾರತೀಯನಿಗೆ ಜಾತಿ, ಧರ್ಮಕ್ಕಿಂತ ದೇಶ ಮುಖ್ಯವಾಗಬೇಕು. ದೇಶದ ಅಭಿವೃದ್ಧಿಗಾಗಿ ಶ್ರಮಿಸುವಂತಹ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತಹ ಅಭ್ಯರ್ಥಿಯನ್ನು ಆಯ್ಕೆಮಾಡಿದಾಗ ಮಾತ್ರ ದೇಶ ಬದಲಾಗುವುದಕ್ಕೆ ಸಾಧ್ಯ. ಆ ನಿಟ್ಟಿನಲ್ಲಿ ಯೋಚಿಸಿ ತಪ್ಪದೆ ಮತದಾನ ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ.ರಾಮು ಎಲ್., ಉಚಿತ ಶಿಕ್ಷಣವನ್ನು, ಉಚಿತ ಆರೋಗ್ಯ ಸೌಲಭ್ಯ ನೀಡುವ ಸರ್ಕಾರ ಹಿಂದಿಂಗಿಂತ ಇಂದು ಹೆಚ್ಚು ಅಗತ್ಯವಿದೆ. ವೋಟನ್ನು ಮಾರಿಕೊಳ್ಳದೆ ದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಚಲಾಯಿಸೋಣ ಎಂದರು.ಕಾರ್ಯಕ್ರಮದಲ್ಲಿ ರಾ.ಸೇ. ಯೋಜನಾಧಿಕಾರಿಗಳಾದ ಸಂದೀಪ್, ಸುಪರ್ಣ, ಪ್ರಾಂಶುಪಾಲರಾದ ಸಹ ಯೋಜನಾಧಿಕಾರಿ ಡಾ. ನಾಗರಾಜ್ ಉಪಸ್ಥಿತರಿದ್ದರು.* ಯುಪಿಎಂಸಿಯಲ್ಲಿ ಮತದಾನ ಜಾಗೃತಿ
ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಅದಮಾರು ಪೂರ್ಣಪ್ರಜ್ಞಾ ಪಪೂ ಕಾಲೇಜಿನ ಇತಿಹಾಸ ಉಪನ್ಯಾಸಕ ಮಧುರಾಜ್, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ, ಮತದಾನಕ್ಕೆ ಸಂಬಂಧಿಸಿದ ಚುನಾವಣಾ ಆಯೋಗದ ನೀತಿ ನಿಯಮಗಳು ಹಾಗೂ ಚುನಾವಣಾ ವಿದ್ಯುನ್ಮಾನ ಯಂತ್ರಗಳ ಬಗ್ಗೆ ಮಾಹಿತಿ ನೀಡಿ, ಸ್ವಯಂಪ್ರಜ್ಞೆ ಮತ್ತು ವಿವೇಚನಾಯುತವಾಗಿ ಮತದಾನ ಮಾಡಬೇಕೆಂದು ಕರೆಕೊಟ್ಟರು.ಈ ಸಂದರ್ಭ ಎನ್.ಎಸ್.ಎಸ್. ಘಟಕದ ಸಹ ಯೋಜನಾಧಿಕಾರಿ ಚಂದ್ರಶೇಖರ್, ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಘಟಕ ಯೋಜನಾಧಿಕಾರಿ ರಾಜೇಶ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.