ಕನ್ನಡಪ್ರಭ ವಾರ್ತೆ ಬೀದರ್
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಕ್ಷೇತ್ರ ಹಾಗೂ ಕನ್ನಡದ ಸೇವೆ ಪರಿಗಣಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿಗಳು ಹಾಗೂ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರಿಗೆ ನಾಡೋಜ ಪದವಿ ಪ್ರಶಸ್ತಿ ನೀಡಿರುವುದು ನಮಗೆಲ್ಲ ಬಹಳ ಸಂತೋಷ ತಂದಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ್ ತಿಳಿಸಿದರು.ಶನಿವಾರ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿ ಡಾ. ಬಸವಲಿಂಗ ಪಟ್ಟದ್ದೇವರನ್ನು ಸನ್ಮಾನಿಸಿ ಮಾತನಾಡಿ, ತ್ರಿವಿಧ ದಾಸೋಹ ಸೇವೆ ಮಾಡುತ್ತಿರುವ ಶ್ರೀಗಳಿಗೆ ಕರ್ನಾಟಕದ ಮಹತ್ವದ ಪ್ರಶಸ್ತಿಗಳಲ್ಲಿ ಒಂದಾಗಿರುವ ನಾಡೋಜ ಪ್ರಶಸ್ತಿ ಹಿಂದೆಯೇ ಸಿಗಬೇಕಿತ್ತು. ಆದರೆ ತಡವಾದರೂ ಸಿಕ್ಕಿರುವುದು ಖುಷಿ ತಂದಿದೆ. ಇದು ನಮ್ಮ ಜಿಲ್ಲೆಗೆ ಗೌರವ, ಅಭಿಮಾನ, ಹೆಮ್ಮೆ ತಂದಿದೆ ಎಂದರು.
ಭಾಲ್ಕಿ ಹಿರೇಮಠ ಕನ್ನಡದ ಮಠ ಎಂದೇ ರಾಜ್ಯದಲ್ಲಿ ಖ್ಯಾತಿ ಹೊಂದಿದೆ. ಲಿಂ. ಪೂಜ್ಯ ಚನ್ನಬಸವ ಪಟ್ಟದ್ದೇವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಶ್ರೀಗಳು ಕನ್ನಡವನ್ನು ಉಸಿರಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಮ್ಮ ಭಾಗದಲ್ಲಿ ಕನ್ನಡ ಗಟ್ಟಿಯಾಗಿ ಇರಲು ಭಾಲ್ಕಿ ಹಿರೇಮಠ ಪ್ರಮುಖ ಪಾತ್ರ ವಹಿಸಿದೆ. ಕನ್ನಡದ ಹಿರೇಮಠದ ಶ್ರೀಗಳಿಗೆ ನಾಡೋಜ ಪದವಿ ಪುರಸ್ಕಾರ ಸಿಕ್ಕಿರುವುದಕ್ಕೆ ಜಿಲ್ಲೆಯ ಕೀರ್ತಿ ಹೆಚ್ಚಾಗಿದೆ ಎಂದು ಹೇಳಿದರು.ಬಸವತತ್ವ ಪ್ರಚಾರ, ಪ್ರಸಾರ, ಶೈಕ್ಷಣಿಕ ಸೇವೆ, ಅನಾಥ ಮಕ್ಕಳ ರಕ್ಷಣೆ ಪೋಷಣೆ ಸೇರಿ ಪಟ್ಟದ್ದೇವರು ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಿರೇಮಠವನ್ನು ಕನ್ನಡ ಮತ್ತು ಜನರ ಮಠವಾಗಿ ಪರಿವರ್ತಿಸಿದ್ದಾರೆ. ಬಸವಕಲ್ಯಾಣದಲ್ಲಿ 650 ಕೋಟಿ ರು. ವೆಚ್ಚದಲ್ಲಿ ನೂತನ ಅನುಭವ ಮಂಟಪ ಕಾಮಗಾರಿ ನಡೆಯುತ್ತಿದೆ ಎಂದರು.
ಈ ವೇಳೆ ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಸದಾ ಜನರೊಂದಿಗೆ ಬೆರೆಯುವ, ಸರಳ ಸಜ್ಜನಿಕೆಯ ನಾಯಕರಾಗಿರುವ ಪ್ರಭು ಚವ್ಹಾಣ್ ಅವರು ಜಿಲ್ಲೆಯ ಜನತೆ ಸದಾ ನೆನಪಿಡುವ ಕೆಲಸಗಳನ್ನು ಮಾಡಿದ್ದಾರೆ ಎಂದರು.ಪೂಜ್ಯ ಗುರುಬಸ ಪಟ್ಟದೇವರು ಮಾತನಾಡಿ, ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿರುವುದು, ಜಿಲ್ಲಾ ರಂಗಮಂದಿರಕ್ಕೆ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರವೆಂದು ನಾಮಕರಣ ಮಾಡಿರುವುದು, ಇವರ ಅವಧಿಯಲ್ಲಿಯೇ ನೂತನ ಅನುಭವ ಮಂಟಪಕ್ಕೆ ಭೂಮಿ ಪೂಜೆಯಾಗಿದೆ. ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಔರಾದ್ ಎಪಿಎಂಸಿ ಅಧ್ಯಕ್ಷ ದೊಂಡಿಬಾ ನರೋಟೆ, ಮುಖಂಡರಾದ ಶಿವಾಜಿರಾವ ಪಾಟೀಲ್ ಮುಂಗನಾಳ, ಚನ್ನಬಸವ ಬಳತೆ, ಸೂರ್ಯಕಾಂತ ಅಲ್ಮಾಜೆ, ದೊಂಡಿಬಾ ನರೋಟೆ, ಸತೀಷ ಪಾಟೀಲ್, ರಾಮಶೆಟ್ಟಿ ಪನ್ನಾಳೆ, ಅಮೃತರಾವ್ ವಟಗೆ, ಖಂಡೋಬಾ ಕಂಗಟೆ, ಜೈಪಾಲ ರೆಡ್ಡಿ, ಶಿವಾನಂದ ವಡ್ಡೆ, ಶ್ರೀಮಂತ ಪಾಟೀಲ್ ಹೆಡಗಾಪೂರ, ಶಿವಕುಮಾರ ಪಾಂಚಾಳ, ರಾಜಕುಮಾರ ಸೋರಾಳೆ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ಬಾಲಾಜಿ ವಾಗ್ಮಾರೆ, ಅಶೋಕ ಅಲ್ಮಾಜೆ, ಪ್ರವೀಣ ಕಾರಬಾರಿ, ಸಾಗರ ಪಾಟೀಲ್ ಸೇರಿದಂತೆ ಇತರರಿದ್ದರು.