ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರ್ಹತಾ ಪರೀಕ್ಷೆ ಮೂಲಕ ಪ್ರತಿಷ್ಠಿತ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ೩೫ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪ್ರತಿಷ್ಠಿತ ಶಾಲೆಗೆ ಆಯ್ಕೆಯಾಗಿರುವ ಪ್ರತಿಭಾವಂತ ಮಕ್ಕಳು ಹಾಗೂ ಅವರ ಪೋಷಕರೊಂದಿಗೆ ಸಭೆ ನಡೆಸಿ ಮಾತನಾಡಿದರು. ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಕಲ್ಪಿಸಲು ಶೇ. 60ಕ್ಕಿಂತ ಹೆಚ್ಚಿನ ಅಂಕಗಳಿಸಿ 5ನೇ ತರಗತಿ ಉತ್ತೀರ್ಣರಾದ ಮಕ್ಕಳನ್ನು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ. ವಿಶೇಷ ವರ್ಗದ 4 ಹಾಗೂ ಪರಿಶಿಷ್ಟ ಜಾತಿಯ 31 ವಿದ್ಯಾರ್ಥಿಗಳು ಸೇರಿ ಒಟ್ಟು 35 ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಆರು ಪ್ರತಿಷ್ಠಿತ ಶಾಲೆಗಳಲ್ಲಿ ಶೇ. ೫೦ರಷ್ಟು ಬಾಲಕ ಹಾಗೂ ಶೇ. ೫೦ರಷ್ಟು ಬಾಲಕಿಯರಿಗೆ ಪ್ರವೇಶ ಕಲ್ಪಿಸಲಾಗುವುದು. ಪೋಷಕರು ತಮ್ಮ ಮಕ್ಕಳ ದಾಖಲಾತಿಗೆ ಸಮೀಪದ ಶಾಲೆಯನ್ನು ಆಯ್ಕೆ ಮಾಡಿ ಇನ್ನೆರಡು ದಿನಗಳೊಳಗಾಗಿ ಮನವಿ ಸಲ್ಲಿಸಿದಲ್ಲಿ ಆದ್ಯತೆ ಮೇಲೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದರು. ಆಯ್ಕೆಯಾದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶಾಲಾ ಪಾಠಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನಗಳನ್ನು ತಲುಪಬೇಕು. ಮುಂದಿನ 20 ವರ್ಷಗಳ ಬಳಿಕ ಇದೇ ಜಿಲ್ಲಾಧಿಕಾರಿಗಳ ಸ್ಥಾನದಲ್ಲಿ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಲು ನಾನು ಬಯಸುತ್ತೇನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲಹರಣ ಮಾಡದೆ ನಿರಂತರ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.ಬಡತನದಲ್ಲಿ ಹುಟ್ಟಿ ತಮ್ಮ ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇರಿದ ಡಾ: ಎಪಿಜೆ ಅಬ್ದುಲ್ ಕಲಾಂ ಬಗ್ಗೆ ಮಕ್ಕಳಿಗೆ ತಿಳಿಸುತ್ತಾ, ಅವರ ಪರಿಶ್ರಮದ ಹಾದಿಯನ್ನು ಮಕ್ಕಳು ಅನುಸರಿಸಬೇಕೆಂದು ಉತ್ತೇಜನ ನುಡಿಗಳನ್ನಾಡಿದರು.ಪೋಷಕರೂ ಸಹ ತಮ್ಮ ಮಕ್ಕಳ ಓದಿಗೆ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಮೊಬೈಲ್ ನೀಡಿ ಅವರ ಭವಿಷ್ಯವನ್ನು ಹಾಳು ಮಾಡಬಾರದು. ಮೊಬೈಲ್ ಮನರಂಜನೆಗಾಗಿ ಬಳಸದೆ ಶೈಕ್ಷಣಿಕ ಮಾಹಿತಿಗಾಗಿ ಮಾತ್ರ ಮಿತವಾಗಿ ಬಳಸುವಂತೆ ಮಕ್ಕಳ ಮೇಲೆ ಎಚ್ಚರ ವಹಿಸಬೇಕು. ಮಕ್ಕಳು ಹೆತ್ತವರ ಮಾತನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರದಿಂದ ಜಿಲ್ಲೆಗೆ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿಭಾವಂತ ಮಕ್ಕಳಿಗೆ ಪ್ರವೇಶ ಕಲ್ಪಿಸಲು ೩೫ ಸೀಟುಗಳು ಮಾತ್ರ ಹಂಚಿಕೆಯಾಗಿದ್ದು, ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ವಿದ್ಯಾರ್ಥಿಗಳ ಸೀಟು ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಾರತಮ್ಯವಾಗದಂತೆ ಸಮಾನ ಶಿಕ್ಷಣ ನೀಡುತ್ತಿರುವ ಬಗ್ಗೆ ನಿಗಾವಹಿಸಬೇಕು. ಈಗಾಗಲೇ ಶಾಲಾ ದಾಖಲಾತಿ ಪ್ರಾರಂಭವಾಗಿರುವುದರಿಂದ ಆದಷ್ಟು ಬೇಗ ಮಕ್ಕಳ ದಾಖಲಾತಿ ಹಾಗೂ ಸಮವಸ್ತ್ರ, ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ತುಮಕೂರು ನಗರದ ಬಟವಾಡಿಯ ಚೇತನ ವಿದ್ಯಾ ಮಂದಿರ, ಶಿರಾ ರಸ್ತೆ ಶ್ರೀದೇವಿ ವಿದ್ಯಾ ಮಂದಿರ ಹಾಗೂ ಡಾನ್‌ಬಾಸ್ಕೋ ಶಾಲೆ, ಬನಶಂಕರಿಯ ಎಸ್‌ವಿಎಸ್ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಬೆಳಗುಂಬದ ಕೆಂಪೇಗೌಡ ವಸತಿ ಶಾಲೆ ಹಾಗೂ ಕೊರಟಗೆರೆಯ ರವೀಂದ್ರ ಭಾರತಿ ವಿದ್ಯಾಮಂದಿರ ಸೇರಿ 6 ಶಾಲೆಗಳನ್ನು ಪ್ರತಿಷ್ಠಿತ ಶಾಲೆಗಳೆಂದು ಗುರುತಿಸಲಾಗಿದೆ. ಪ.ಜಾತಿಗೆ ಸೇರಿದ 31 ವಿದ್ಯಾರ್ಥಿಗಳು ಸೇರಿದಂತೆ ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಸರ್ಕಾರದಿಂದ ವಿಶೇಷ ವರ್ಗವೆಂದು ಪರಿಗಣಿಸಲಾದ ವಿಕಲಚೇತನ ಹೊಂದಿದ, ಕೋವಿಡ್-19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ ತಾಯಿಯನ್ನು ಕಳೆದುಕೊಂಡ, ಸಫಾಯಿ ಕರ್ಮಚಾರಿಗಳ, ದೇವದಾಸಿಯರ, ಸಿಂಗಲ್ ಫ್ಯಾಮಿಲಿ, ಯೋಜನಾ ನಿರಾಶ್ರಿತರ, ಮಾಜಿ ಸೈನಿಕರ, ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮಕ್ಕಳು, ಕೃಷಿ ಕಾರ್ಮಿಕರ, ಸಾಲ ಬಾಧೆಯಿಂದ ಆತ್ಮಹತ್ಯೆಗೆ ಗುರಿಯಾದವರ, ದೌರ್ಜನ್ಯದಲ್ಲಿ ನೊಂದವರ, ಜೀತ ವಿಮುಕ್ತರ, ಅಲೆಮಾರಿ ಜನಾಂಗದ 4 ಮಕ್ಕಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರತಿಷ್ಠಿತ ಶಾಲೆಗೆ ಆಯ್ಕೆಯಾದ ಪ್ರತಿಭಾವಂತ ಮಕ್ಕಳನ್ನು ಜಿಲ್ಲಾಧಿಕಾರಿ ಗೌರವಿಸಿದರು. ಡಯಟ್ ಪ್ರಾಚಾರ್ಯ ಮಂಜುನಾಥ್, ಪ್ರತಿಷ್ಠಿತ ಶಾಲೆಗೆ ಆಯ್ಕೆಯಾದ ಮಕ್ಕಳು ಹಾಗೂ ಅವರ ಪೋಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.