ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗೆ ಉಪಯೋಗವಿಲ್ಲ: ಆರೋಪ

KannadaprabhaNewsNetwork | Published : Feb 4, 2024 1:36 AM

ಸಾರಾಂಶ

ದೇಶದ ರೈತರ ಬಾಳಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆ ತರುವ ಯೋಜನೆ ಎಂದು ಪ್ರಧಾನಮಂತ್ರಿಯಾದಿಯಾಗಿ ಆಳುವ ಸರ್ಕಾರಗಳಿಂದ ಬಿಂಬಿತವಾದ ಈ ಯೋಜನೆಯಿಂದ ರೈತರಿಗೆ ಯಾವುದೇ ಲಾಭವಾಗುತ್ತಿಲ್ಲ. ಈ ಯೋಜನೆ ಹೆಸರಲ್ಲಿ ಖಾಸಗಿ ವಿಮೆ ಕಂಪನಿಗಳಿಗೆ ಸರ್ಕಾರ ಹಾಗೂ ರೈತರ ಹಣವನ್ನು ದೋಚಲು ಅನುಕೂಲ ಮಾಡಿಕೊಡಲಾಗುತ್ತಿದೆ. ಮೊದಲಿಗೆ ಬೆಳೆ ನಷ್ಟ ಹೊಂದಿದ ರೈತರಿಗೆ ಈ ವಿಮೆ ಯೋಜನೆಯಲ್ಲಿ ಪರಿಹಾರ ನೀಡಲು ನಿಗದಿಪಡಿಸಿರುವ ಮಾನದಂಡವೇ ರೈತ ವಿರೋಧಿಯಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರುಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ವಿಮೆ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನಾಡಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದೇಶದ ರೈತರ ಬಾಳಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆ ತರುವ ಯೋಜನೆ ಎಂದು ಪ್ರಧಾನಮಂತ್ರಿಯಾದಿಯಾಗಿ ಆಳುವ ಸರ್ಕಾರಗಳಿಂದ ಬಿಂಬಿತವಾದ ಈ ಯೋಜನೆಯಿಂದ ರೈತರಿಗೆ ಯಾವುದೇ ಲಾಭವಾಗುತ್ತಿಲ್ಲ ಎಂದು ದೂರಿದರು.

ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಈ ಯೋಜನೆ ಹೆಸರಲ್ಲಿ ಖಾಸಗಿ ವಿಮೆ ಕಂಪನಿಗಳಿಗೆ ಸರ್ಕಾರ ಹಾಗೂ ರೈತರ ಹಣವನ್ನು ದೋಚಲು ಅನುಕೂಲ ಮಾಡಿಕೊಡಲಾಗುತ್ತಿದೆ. ಮೊದಲಿಗೆ ಬೆಳೆ ನಷ್ಟ ಹೊಂದಿದ ರೈತರಿಗೆ ಈ ವಿಮೆ ಯೋಜನೆಯಲ್ಲಿ ಪರಿಹಾರ ನೀಡಲು ನಿಗದಿಪಡಿಸಿರುವ ಮಾನದಂಡವೇ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಬೆಳೆ ನಷ್ಟ ಹೊಂದಿದ ರೈತರು ಪ್ರತ್ಯೇಕವಾಗಿ ವಿಮೆ ಮೊತ್ತ ಪಡೆಯಲು ಸಾಧ್ಯವಿಲ್ಲ. ಬದಲಾಗಿ ಇಡೀ ತಾಲೂಕು/ಬ್ಲಾಕ್ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದರೆ ಮಾತ್ರ ವಿಮೆ ಮಾಡಿಸಿರುವ ರೈತನಿಗೆ ಪರಿಹಾರ ದೊರೆಯುತ್ತದೆ ಎಂದರು.

ಈ ಯೋಜನೆಯಿಂದ ರೈತರಿಗೆ ನಯಾಪೈಸೆ ಅನುಕೂಲವೂ ಆಗುತ್ತಿಲ್ಲ. ರೈತರು ಹಾಗೂ ಸರ್ಕಾರ ನೀಡುವ ವಂತಿಗೆ ಹಣದಿಂದ ಖಾಸಗಿ ವಿಮೆ ಕಂಪನಿಗಳ ಖಜಾನೆ ತುಂಬುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ ಎಂದು ದೂರಿದರು.

ಬರಗಾಲ ಘೋಷಣೆಯಾಗಿ ಹಲವಾರು ತಿಂಗಳುಗಳೆ ಕಳೆದರೂ ಸಹ ಫಸಲ್ ಬಿಮಾ ಯೋಜನೆ ಅಡಿ ತಾಲೂಕಿನ ರಾಗಿ ಬೆಳೆದ ರೈತರು ಸೇರಿದಂತೆ ಇತರೆ ಬೆಳೆಗಳಿಗೆ ವಿಮಾ ಮೊತ್ತ ಬಿಡುಗಡೆಯಾಗಿಲ್ಲ. ಈ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ರಾಗಿ ಬೆಳೆಗಾರ ರೈತರಿಗೆ ತಕ್ಷಣ ವಿಮಾ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ನಂತರ ಉಪ ತಹಸೀಲ್ದಾರ್ ಸುನೀಲ್ ಮೂಲಕ ಜಿಲ್ಲಾಧಿಕಾರಿ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್. ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಮಹಾದೇವು ಮಾರಗೌಡನಹಳ್ಳಿ, ನಾರಾಯಣಗೌಡ ಕೊನ್ನಾಪುರ, ಹಲಗೂರು ಪ್ರಮೀಳಾ, ಗೊಲ್ಲರಹಳ್ಳಿ ಗಣೇಶ್ , ಬೆನಮನಹಳ್ಳಿ ಲಿಂಗರಾಜ, ರವಿಗೌಡ, ತಮ್ಮಣ್ಣಗೌಡ, ಮಹಾದೇವು, ನಾಗೇಶ, ವಂದ್ರಿ ಬಾಬಣ್ಣ, ಗ್ರಾಪಂ ಸದಸ್ಯರಾದ ತಿಮ್ಮೇಗೌಡ, ಶಿವಪ್ಪ ಭಾಗವಹಸಿದ್ದರು.

Share this article