ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ನಡೆದ 6ನೇ ಘಟಿಕೋತ್ಸವ ಸಮಾರಂಭದಲ್ಲಿ ಡಾ. ಪ್ರಜ್ಞಾ ಭೂಷಣ್ ಅವರಿಗೆ (ಎಂ.ಡಿ ಮಕ್ಕಳ ತಜ್ಞರು) ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಘಟಿಕೋತ್ಸವ ಸಮಾರಂಭ ನೆರವೇರಿತು. ತಮ್ಮ ಪರಿಶ್ರಮ, ಅಧ್ಯಯನದ ಬದ್ಧತೆ ಹಾಗೂ ವೈದ್ಯಕೀಯ ಕ್ಷೇತ್ರದ ಮೇಲಿನ ಆಸಕ್ತಿಯಿಂದ ಈ ಮಹತ್ವದ ಸಾಧನೆ ಮಾಡಿರುವ ಡಾ. ಪ್ರಜ್ಞಾ ಭೂಷಣ್ ಅವರನ್ನು ಗಣ್ಯರು ಅಭಿನಂದಿಸಿದರು.ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ. ನಾಗಹನುಮ, ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎನ್. ಶ್ರೀಧರ, ಮೌಲ್ಯಮಾಪನ ಕುಲಸಚಿವ ಡಾ. ನಾಗರಾಜು, ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ಪ್ರಜ್ಞಾ ಭೂಷಣ್ ಅವರ ಈ ಸಾಧನೆಗೆ ಸಚಿವ ಕೆ.ಎಂ. ಶಿವಲಿಂಗೇಗೌಡ, ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶಿಬಿರ ಹೆಗ್ಗಡೆ, ತಾಲೂಕು ಔಷಧಿ ಮಾರಾಟಗಾರರ ಸಂಘದ ಅಧ್ಯಕ್ಷ ಟಿ.ಸಿ. ಸತ್ಯನಾರಾಯಣ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.ಕುಟುಂಬದ ವೈದ್ಯಕೀಯ ಪರಂಪರೆಯನ್ನು ಮುಂದುವರಿಸಿರುವ ಡಾ. ಪ್ರಜ್ಞಾ ಭೂಷಣ್ ಅವರು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದ್ದಾರೆ.