ಜನಸಾಮಾನ್ಯರು ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಪ್ರಜಾಸೇವಾ ಅಭಿಯಾನ ಇಲಾಖೆಯನ್ನೇ ಹುಟ್ಟುಹಾಕಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಹಾಗೂ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜನಸಾಮಾನ್ಯರು ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಪ್ರಜಾಸೇವಾ ಅಭಿಯಾನ ಇಲಾಖೆಯನ್ನೇ ಹುಟ್ಟುಹಾಕಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಹಾಗೂ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ಸುರಪುರ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ನೂತನ ಪ್ರಜಾಸೇವಾ ಇಲಾಖೆಯ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ಬಡ ಹಾಗೂ ಸಾಮಾನ್ಯ ಜನರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಡುವತ್ತ ರಾಜ್ಯ ಸರ್ಕಾರ ಸದಾ ಸಿದ್ಧವಿದೆ ಎಂದು ಅವರು, ಮುಖ್ಯಮಂತ್ರಿಗಳು ತಮ್ಮ ಕನಸಿನ, ಹೊಸ ಕಲ್ಪನೆಯ ನೂತನ ಪ್ರಜಾಸೇವಾ ಇಲಾಖೆಯನ್ನೇ ಹುಟ್ಟುಹಾಕಿದ್ದಾರೆ. ಜನರ ಸಮಸ್ಯೆಗಳಿಗೆ ವಿಶೇಷವಾಗಿ ಜನ ಸಾಮಾನ್ಯರು ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸಲು ಈ ಅಭಿಯಾನ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಪ್ರತಿ ಮೊದಲನೇ ಹಾಗೂ ಮೂರನೇ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಜಾ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಜಿಲ್ಲೆಯಲ್ಲಿಯೂ ಕೂಡ ಸಾರ್ವಜನಿಕರು ಮೊದಲನೇ ಹಾಗೂ ಮೂರನೇ ಶನಿವಾರ ಬೇರೆ ಬೇರೆ ನಿಗದಿತ ತಾಲೂಕು ಕೇಂದ್ರಗಳಲ್ಲಿ ತಮ್ಮ ಸಮಸ್ಯೆಗಳ ಕುರಿತ ಅರ್ಜಿ ಸಲ್ಲಿಸುವ ಮೂಲಕ ನೋಂದಾಯಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದರಂತೆ ಇತರೆ ಶನಿವಾರಗಳಂದು ಹೋಬಳಿ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಲು ಅವಕಾಶವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜನಸ್ನೇಹಿ ಸರ್ಕಾರವಾಗಿದೆ, ಜನರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮುಖ್ಯ ಉದ್ದೇಶ ಹೊಂದಿದೆ. ರಾಜ್ಯದ ಜನತೆಗೆ ಭರವಸೆ ನೀಡಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಂಚಗ್ಯಾರಂಟಿ ಯೋಜನೆ ಜಾರಿಗೊಳಿಸಿ ಬಡವರ ಬಗ್ಗೆ ಬದ್ಧತೆ ತೋರಿಸಿದೆ. ಅದರಂತೆ ರಾಜ್ಯದ ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಈ ಹೊಸ ಇಲಾಖೆ ಹುಟ್ಟು ಹಾಕಿ ಅಭಿಯಾನ ಆರಂಭಿಸಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಇದಾಗಿದೆ ಎಂದು ಹೇಳಿದರು.
ಸಮಾಜದ ಕಟ್ಟಕಡೆಯ ಬಡ ವರ್ಗದ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಉದ್ದೇಶ ಹೊಂದಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಿ ಜನರ ಸಮಸ್ಯೆ ಪರಿಹರಿಸಲು ಉದ್ದೇಶಿಸಿ ಈ ಅಭಿಯಾನ ಆರಂಭಿಸಿದೆ. ಜನತೆಯ ಸೇವೆಗೆ ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಅವರು, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಕಾಳಜಿಯಿಂದ ರಾಜ್ಯದಾದ್ಯಂತ ಪ್ರಜಾಸೇವೆ ನೂತನ ಇಲಾಖೆ ಆರಂಭಿಸಿ, ಜನರ ಅಹವಾಲುಗಳಿಗೆ ಸ್ಪಂದಿಸಲಾಗುತ್ತಿದೆ. ಜನರು ತಮ್ಮ ಕುಂದುಕೊರತೆ ಇದ್ದಲ್ಲಿ ಪ್ರತಿ ಶನಿವಾರ ನಡೆಯುವ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅರ್ಜಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಹ ಅವಕಾಶವಿದೆ ಎಂದ ಅವರು, ರಾಜ್ಯದ ಸಚಿವರು, ಶಾಸಕರು ಜನರೊಂದಿಗೆ ಸದಾ ಇರಲಿದ್ದು, ಬಡವರಿಗೋಸ್ಕರ ಸರ್ಕಾರ ನಮ್ಮದಾಗಿದೆ. ಹಗಲಿರುಳು ತಮ್ಮ ಸೇವೆಗೆ ನಾವು ಬದ್ಧವಾಗಿದ್ದು, ಸುರಪುರ ಕ್ಷೇತ್ರದಲ್ಲಿ ಮೊದಲ ಬಾರಿಯ ಈ ಅಭಿಯಾನ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ್, ಸುರಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೆದಾರ್, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟೂರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.