ಕಾಡಸಿದ್ಧೇಶ್ವರ ದೇವರ ಜಾತ್ರೆಗೂ ಪ್ರಜಾಸೌಧ ಎಫೆಕ್ಟ್!

KannadaprabhaNewsNetwork |  
Published : Sep 30, 2026, 03:00 AM IST
ರಾಜಕಾರಣಿಗಳಿಗೆ ಪ್ರಜಾಸೌಧ ಎಫೆಕ್ಟ್ : ಆಹ್ವಾನವಿಲ್ಲ! | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬನಹಟ್ಟಿಯ ಆರಾಧ್ಯ ದೈವ ಕಾಡಸಿದ್ಧೇಶ್ವರ ದೇವರ ಜಾತ್ರೆ ಮಂಗಳವಾರ ಆರಂಭವಾಗಿದ್ದು, ಈ ಬಾರಿ ಜಾತ್ರೆಯ ಸಂಭ್ರಮಕ್ಕಿಂತಲೂ ಬನಹಟ್ಟಿಯಲ್ಲೇ ಪ್ರಜಾಸೌಧ ಎಂಬ ಹಕ್ಕೊತ್ತಾಯವೇ ಎಲ್ಲೆಡೆ ರಾರಾಜಿಸುತ್ತಿದೆ. ಪ್ರತಿ ವರ್ಷ ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ಆಹ್ವಾನಿಸುವ, ಎಲ್ಲೆಡೆ ರಾಜಕೀಯ ನಾಯಕರ ಬ್ಯಾನರ್‌ಗಳು ರೇಜಿಗೆಯಾಗುವಷ್ಟು ಕಾಣಿಸುತ್ತಿದ್ದವು. ಆದರೆ, ಈ ಬಾರಿ ಆ ದೃಶ್ಯ ಬಹುತೇಕ ಮಾಯವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯ ಆರಾಧ್ಯ ದೈವ ಕಾಡಸಿದ್ಧೇಶ್ವರ ದೇವರ ಜಾತ್ರೆ ಮಂಗಳವಾರ ಆರಂಭವಾಗಿದ್ದು, ಈ ಬಾರಿ ಜಾತ್ರೆಯ ಸಂಭ್ರಮಕ್ಕಿಂತಲೂ ಬನಹಟ್ಟಿಯಲ್ಲೇ ಪ್ರಜಾಸೌಧ ಎಂಬ ಹಕ್ಕೊತ್ತಾಯವೇ ಎಲ್ಲೆಡೆ ರಾರಾಜಿಸುತ್ತಿದೆ. ಪ್ರತಿ ವರ್ಷ ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ಆಹ್ವಾನಿಸುವ, ಎಲ್ಲೆಡೆ ರಾಜಕೀಯ ನಾಯಕರ ಬ್ಯಾನರ್‌ಗಳು ರೇಜಿಗೆಯಾಗುವಷ್ಟು ಕಾಣಿಸುತ್ತಿದ್ದವು. ಆದರೆ, ಈ ಬಾರಿ ಆ ದೃಶ್ಯ ಬಹುತೇಕ ಮಾಯವಾಗಿದೆ.

ರಾಜಕೀಯ ಬ್ಯಾನರ್‌ಗಳಿಗೂ ಜಾಗವಿಲ್ಲ. ಇದು ಕೇವಲ ಜಾತ್ರೆಯಲ್ಲಿನ ಬದಲಾವಣೆಯಲ್ಲ, ಬನಹಟ್ಟಿಯಲ್ಲಿ ನಡೆದ ಪ್ರಜಾಸೌಧ ಹೋರಾಟದ ಪರಿಣಾಮಕ್ಕೆ ಕಾರಣ ಎನ್ನಬಹುದು. ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣವಾಗಬೇಕೆಂಬ ಬೇಡಿಕೆಗೆ ಆಗ್ರಹಿಸಿ ಪ್ರಜಾಸೌಧ ಹೋರಾಟ ಸಮಿತಿ ನಡೆಸಿದ 39 ದಿನಗಳ ಸತ್ಯಾಗ್ರಹ ಹಾಗೂ 6 ದಿನಗಳ ಅಮರಣಾಂತ ಉಪವಾಸ ನಡೆದಿತ್ತು. ಹೋರಾಟದ ಹಿನ್ನೆಲೆಯಲ್ಲಿ ಆಡಳಿತದ ಭರವಸೆಯೊಂದಿಗೆ ಸತ್ಯಾಗ್ರಹ ಮುಕ್ತಾಯಗೊಳಿಸಲಾಗಿದ್ದರೂ, ಬನಹಟ್ಟಿಯ ಹಕ್ಕಿನ ಬೇಡಿಕೆ ಮಾತ್ರ ಹೋರಾಟದ ವೇದಿಕೆಯಿಂದ ಜಾತ್ರೆಯ ಅಂಗಳಕ್ಕೂ ವಿಸ್ತರಿಸಿರುವುದು ವಿಶೇಷ. ಹೋರಾಟ ಮುಕ್ತಾಯವಾದರೂ ಹಕ್ಕೊತ್ತಾಯ ಮುಕ್ತಾಯವಾಗಿಲ್ಲ ಎಂಬ ಸಂದೇಶವನ್ನು ಜಾತ್ರೆ ಸಂದರ್ಭದಲ್ಲಿಯೂ ನೀಡಲಾಗುತ್ತಿದೆ.

ಬ್ಯಾನರ್‌ಗಳ ಜಾತ್ರೆಗೆ ಬ್ರೇಕ್!: ಪ್ರತಿವರ್ಷ ರಾಜಕೀಯ ನಾಯಕರ ಬ್ಯಾನರ್‌ಗಳಿಂದ ಕಂಗೊಳಿಸುತ್ತಿದ್ದ ಬನಹಟ್ಟಿಯ ಜಾತ್ರೆಯಲ್ಲಿ ಈ ಬಾರಿ ರಾಜಕೀಯ ಬ್ಯಾನರ್‌ಗಳು ಕಾಣುತ್ತಿಲ್ಲ. ಹೋರಾಟ ಸಮಿತಿಯ ಕಟ್ಟುನಿಟ್ಟಿನ ನಿಲುವಿನಿಂದಾಗಿ ರಾಜಕೀಯ ಬ್ಯಾನರ್‌ಗಳಿಗೆ ಕಡಿವಾಣ ಬಿದ್ದಿದೆ.

ಸ್ಥಳೀಯರ ಕೆಲ ಬ್ಯಾನರ್‌ಗಳು ಅಲ್ಲಲ್ಲಿ ಅಳವಡಿಕೆಯಾಗಿದ್ದರೂ, ಬನಹಟ್ಟಿಯಲ್ಲೇ ಪ್ರಜಾಸೌಧ ಎಂಬ ಘೋಷವಾಕ್ಯದೊಂದಿಗೆ ಜಾತ್ರೆಯಲ್ಲಿಯೂ ಹೋರಾಟದ ಧ್ವನಿ ಮುಂದುವರಿದಿರುವುದು ಗಮನ ಸೆಳೆಯುತ್ತಿದೆ. ಶಾಸಕರು, ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಈ ಬೆಳವಣಿಗೆಯನ್ನು ಮೌನವಾಗಿ ಸ್ವೀಕರಿಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೋರಾಟ ಮುಗಿದಿಲ್ಲ: ನ್ಯಾಯಯುತ ಹಕ್ಕು ಸಿಗುವವರೆಗೂ ಹೋರಾಟದ ರೂಪ ಮಾತ್ರ ಬದಲಾಗಿದೆ ಎಂಬ ನಿಲುವಿನೊಂದಿಗೆ ಹೋರಾಟ ಸಮಿತಿ ಮುಂದುವರಿಯುತ್ತಿದೆ. ಬನಹಟ್ಟಿಯಲ್ಲೇ ಪ್ರಜಾಸೌಧ ಎಂಬ ಘೋಷಣೆ ಜಾತ್ರೆ ಸಂಭ್ರಮದ ನಡುವೆಯೂ ಮೊಳಗುತ್ತಿದ್ದು, 39 ದಿನಗಳ ಹೋರಾಟದ ಕಾವು ಇನ್ನೂ ತಣ್ಣಗಾಗಿಲ್ಲ ಎಂಬುದನ್ನು ಸಾರುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ