ಕನಕಗಿರಿ ತಾಲೂಕಿನ ನವಲಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನವಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ನಡೆಯಿತು. ಒಟ್ಟು 120ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತಿಯಾಗಿವೆ.
ಕನಕಗಿರಿ: ಪ್ರಜೆಗಳ ಕುಂದು-ಕೊರತೆಗಳನ್ನು ನಿವಾರಿಸುವ ಉದ್ದೇಶದಿಂದಲೇ ಸರ್ಕಾರ ಪ್ರಜಾಸೇವಾ ಅಭಿಯಾನ ನಡೆಸುತ್ತಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.
ತಾಲೂಕಿನ ನವಲಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನವಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪ್ರಜಾಸೇವೆ ಆಂದೋಲನವು ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ತ್ವರಿತ ಪರಿಹಾರ ಒದಗಿಸುವ ವೇದಿಕೆಯಾಗಿದೆ. ಕಳೆದ ವಾರ ಹುಲಿಹೈದರ ಹೋಬಳಿ ಕೇಂದ್ರದಲ್ಲಿ 60 ಅರ್ಜಿಗಳು ಸ್ವೀಕೃತಿಯಾಗಿದ್ದವು. ಈ ವಾರ ನವಲಿ ಹೋಬಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಟ್ಟು 120ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತಿಯಾಗಿವೆ. ಹೀಗೆ ಸಲ್ಲಿಕೆಯಾದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಆನ್‌ಲೈನ್ ಮೂಲಕ ರವಾನಿಸಲಾಗುವುದು. ಸಮಸ್ಯೆಗಳು ಯಾವ ಹಂತದಲ್ಲಿವೆ ಎಂದು ಪರಿಶೀಲಿಸಿ, ಅವುಗಳ ಪರಿಹರಿಸುವುದಕ್ಕಾಗಿ 30 ದಿನಗಳ ಸಮಯವಕಾಶ ಇದ್ದು, ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಹಿಂಬರಹ ನೀಡಲಾಗುವುದು ಎಂದರು. ಆನಂತರ ತಾಪಂ ಇಒ ಕೆ. ರಾಜಶೇಖರ ಮಾತನಾಡಿ, ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಒತ್ತುವರಿ ತೆರವಿಗೆ ಆಗ್ರಹ: ನವಲಿ ಗ್ರಾಮದ ಕಾರಟಗಿ ರಸ್ತೆಯುದ್ದಕ್ಕೂ ಮಾಂಸ, ಕಟಿಂಗ್, ತರಕಾರಿ ಸೇರಿದಂತೆ ನಾನಾ ಅಂಗಡಿಗಳಿದ್ದು, ಇವು ಅನಧಿಕೃತವಾಗಿವೆ. ಶಾಲೆಯ ಪಕ್ಕದಲ್ಲಿಯೇ ತಂಬಾಕು, ಮದ್ಯ ಮಾರಾಟ ಮಾಡುತ್ತಿದ್ದು, ಕೊಳೆತ ಮಾಂಸದ ದುರ್ವಾಸನೆಯೂ ಬೀರುತ್ತಿದೆ. ಕೂಡಲೇ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಯುವಕರು ತಹಸೀಲ್ದಾರ್ ಹಾಗೂ ತಾಪಂ ಇಒ ಅವರಿಗೆ ಆಗ್ರಹಿಸಿದರು.
ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಪಿಐ ವೀರಣ್ಣ ಹಳ್ಳಿ, ಉಪವಲಯ ಅರಣ್ಯಾಧಿಕಾರಿ ಸುಲೇಮಾನ್, ತಾಪಂ ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ, ನಾಗೇಶ ಪೂಜಾರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.