‘ಬೇಡಣ್ಣ’ ಎಂದರೂ ಕೇಳದೆ ಮನೆ ಕೆಲಸದ ಮಹಿಳೆಗೆ ಪ್ರಜ್ವಲ್‌ ರೇಪ್‌

KannadaprabhaNewsNetwork |  
Published : Sep 10, 2024, 01:35 AM IST
ಪ್ರಜ್ವಲ್‌ ರೇವಣ್ಣ | Kannada Prabha

ಸಾರಾಂಶ

ತಮ್ಮ ಮನೆಯಲ್ಲಿ ಕೆಲಸದಲ್ಲಿದ್ದ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಮಹಿಳೆ ಮೇಲೆ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಮನೆಯಲ್ಲಿ ಕೆಲಸದಲ್ಲಿದ್ದ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಮಹಿಳೆ ಮೇಲೆ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಬೇಡಣ್ಣ ಬಿಟ್ಬಿಡಿ ಎಂದು ಹಿರಿಯ ವಯಸ್ಸಿನ ಮಹಿಳೆ ಹೇಳಿದರೂ ಬಿಡದೆ ಪ್ರಜ್ವಲ್‌ ಅತ್ಯಾಚಾರ ಎಸಗಿ, ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದೆ.

ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ 1,652 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಎಸ್‌ಐಟಿ, ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಕೃತ್ಯ ರುಜುವಾತಾಗಿದೆ ಎಂದು ಉಲ್ಲೇಖಿಸಿದೆ. ಇದು ಪ್ರಜ್ವಲ್ ವಿರುದ್ಧ ಸಲ್ಲಿಕೆಯಾದ ಎರಡನೇ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿಯಾಗಿದೆ.

ಹಾಸನ ಪೆನ್‌ ಡ್ರೈವ್ ಹಗರಣ ಬೆಳಕಿಗೆ ಬಂದ ಕೂಡಲೇ ಈ ಸಂತ್ರಸ್ತೆಯನ್ನು ತಮ್ಮ ಸಹಚರರ ಮೂಲಕ ಮಾಜಿ ಸಂಸದರ ತಂದೆ ಹಾಗೂ ಮಾಜಿ ಸಚಿವ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಅಪಹರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ರೇವಣ್ಣ ತಂಡ ಬಂಧಿತರಾಗಿ ಜೈಲು ಸೇರಿದ್ದರೆ, ಜಾಮೀನು ಪಡೆದು ಬಂಧನದಿಂದ ಭವಾನಿ ಪಾರಾಗಿದ್ದರು. ಅಂದು ಸಂತ್ರಸ್ತೆಯನ್ನು ರಕ್ಷಿಸಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅತ್ಯಾಚಾರ ಸಂಗತಿ ಬಯಲಾಗಿತ್ತು. ಬಳಿಕ ಸಂತ್ರಸ್ತೆಯ ದೂರು ಆಧರಿಸಿ ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಈಗ ತನಿಖೆಯಲ್ಲಿ ಅತ್ಯಾಚಾರ ನಡೆದಿರುವುದಕ್ಕೆ ವೈಜ್ಞಾನಿಕ ಹಾಗೂ ತಾಂತ್ರಿಕ ಪುರಾವೆಗಳು ಸಿಕ್ಕಿವೆ ಎಂದು ಎಸ್‌ಐಟಿ ಹೇಳಿದೆ.

ಅಣ್ಣ ಬಿಟ್ಬಿಡಿ ಅಂದ್ರೂ ಕೇಳದೆ ಅತ್ಯಾಚಾರ:

ಹೊಳೆನರಸೀಪುರದ ಮನೆ ಹಾಗೂ ಅದೇ ತಾಲೂಕಿನ ವ್ಯಾಪ್ತಿಯ ತೋಟದ ಮನೆಯಲ್ಲಿ ಸಂತ್ರಸ್ತೆ ಕೆಲಸದಲ್ಲಿದ್ದರು. ಆಗ ತಮ್ಮ ಮನೆಯಲ್ಲಿ ಕೋಣೆಗೆ ಕರೆದು ಸಂತ್ರಸ್ತೆ ಹೊರ ಹೋಗದಂತೆ ಪ್ರಜ್ವಲ್‌ ಬಾಗಿಲು ಹಾಕಿದ್ದರು. ಬಳಿಕ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತ ‘ಬಟ್ಟೆ ತೆಗೆಯಮ್ಮ, ಏನೂ ಆಗಲ್ಲ ತೆಗೆಯೇ’ ಎಂದು ಹೇಳಿದ್ದರು. ‘ದಮ್ಮಯ್ಯ ಕಣಣ್ಣ ಬಾಗಿಲು ತೆಗೆದುಬಿಡು’ ಎಂದು ಗೋಳಾಡಿದರೂ ಬಿಡದೆ ಸಂತ್ರಸ್ತೆಯ ಬಟ್ಟೆಯನ್ನು ಪ್ರಜ್ವಲ್ ಬಿಚ್ಚಿಸಿದ್ದರು. ಆಗ ಬಾತ್‌ ರೂಂಗೆ ಹೋಗಬೇಕು ಅರ್ಜೆಂಟ್‌ ಎಂದರೂ ಬಿಡದೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು ಎಂದು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಈ ಅತ್ಯಾಚಾರ ಕೃತ್ಯವನ್ನು ಚಿತ್ರೀಕರಿಸಿಕೊಂಡು ಸಂತ್ರಸ್ತೆಗೆ ಪ್ರಜ್ವಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋವನ್ನು ನಿನ್ನ ಮಗನಿಗೆ ಕಳಿಸುತ್ತೇನೆ ಎಂದು ಬೆದರಿಸಿದ್ದರು. ಇದೇ ರೀತಿ ತೋಟದ ಮನೆಯಲ್ಲಿ ಸಹ ಸಂತ್ರಸ್ತೆ ಮೇಲೆ ಪ್ರಜ್ವಲ್ ಮತ್ತೊಮ್ಮೆ ಬಲಾತ್ಕಾರ ಮಾಡಿದ್ದರು.

ಲಾಕ್‌ಡೌನ್‌ಗಿಂತ ಮೊದಲು ನಡೆದಿದ್ದು:

2021ರ ಕೋವಿಡ್ ಲಾಕ್‌ಡೌನ್ ಪೂರ್ವ ಒಮ್ಮೆ ತೋಟದ ಮನೆಗೆ ಮಧ್ಯಾಹ್ನದ ಸಮಯದಲ್ಲಿ ಪ್ರಜ್ವಲ್ ಹೋಗಿದ್ದರು. ಆ ವೇಳೆ ತೋಟದ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ ಸಂತ್ರಸ್ತೆ ಬಳಿ ಹೋಗಿ ‘ಏನ್ ಕ್ಲೀನ್ ಆಯ್ತಾ ಅಂತಾ ಕೇಳಿ, ನಂಗೆ ಕುಡಿಯೋದಕ್ಕೆ ಒಂದು ಚೊಂಬು ನೀರ್ ತಗಂಡು ಬಾ’ ಅಂತಾ ಹೇಳಿದರು. ಅಂತೆಯೇ ನೀರು ತೆಗೆದುಕೊಂಡು ಪ್ರಜ್ವಲ್ ಇದ್ದ ರೂಮ್‌ನೊಳಗೆ ಸಂತ್ರಸ್ತೆ ತೆರಳಿದ್ದರು. ಆಗ ಕೋಣೆಯ ರೂಮಿನ ಚಿಲಕ ಹಾಕಿ ಸಂತ್ರಸ್ತೆ ಹೊರ ಹೋಗದಂತೆ ನಿರ್ಬಂಧಿಸಿದರು. ಆ ಸಮಯದಲ್ಲಿ ‘ಬಾಗಿಲು ತೆಗಿಯಣ್ಣ ಭಯ ಆಯ್ತದೆ’ ಅಂದರೂ ಸಹ ಆರೋಪಿ ಬಿಡದೆ ಅತ್ಯಾಚಾರ ಎಸಗಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

------

1652 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಮನೆಕೆಲಸದ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಸಂತ್ರಸ್ತೆ ಮೇಲೆ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಎಸಗಿದ ಸಂಬಂಧ 1652 ಪುಟಗಳ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ. ಇದರಲ್ಲಿ 113 ಮಂದಿ ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ಹಾಗೂ ವೈಜ್ಞಾನಿಕ ದಾಖಲೆಗಳ ನಮೂದಿಸಲಾಗಿದೆ ಎಂದು ಎಸ್ಐಟಿ ತಿಳಿಸಿದೆ.

ಆರೋಪಿಯು ಸಂತ್ರಸ್ತೆಯ ಮೇಲೆ ನಿಯಂತ್ರಣ ಹೊಂದಿರುವ ವ್ಯಕ್ತಿಯಾಗಿದ್ದು, ತನ್ನ ಮೇಲಿನ ಅತ್ಯಾಚಾರದ ಬಗ್ಗೆ ಹೇಳಿಕೊಂಡರೆ ತನ್ನ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂದು ಹೆದರಿಕೊಂಡು, ಮಾನ- ಮರ್ಯಾದೆಗೆ ಅಂಜಿ ಆ ಸಮಯದಲ್ಲಿ ಈ ವಿಚಾರವನ್ನು ಸಂತ್ರಸ್ತೆ ಬಹಿರಂಗಪಡಿಸಿರಲಿಲ್ಲ. ಅಲ್ಲದೇ ಅತ್ಯಾಚಾರ 50-376(2)(k), 376(2)(n), 354(A), 354(B), 354(C), 506 ಐಪಿಸಿ ರೀತ್ಯಾ ಪ್ರಜ್ವಲ್ ಅಪರಾಧವೆಸಗಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ