ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕನಗನಮರಡಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ರೈತಸಂಘ ಬೆಂಬಲಿತ ಅಭ್ಯರ್ಥಿ ಪ್ರಮೀಳ ಹೇಮಣ್ಣ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷೆ ಭಾಗ್ಯಮ್ಮರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಪ್ರಮೀಳ ಹೊರತು ಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಪ್ರಮೀಳಹೇಮಣ್ಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ತಾಪಂ ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ ಘೋಷಿಸಿದರು.
ನೂತನ ಅಧ್ಯಕ್ಷೆ ಪ್ರಮೀಳ ಹೇಮಣ್ಣ ಅವರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಎಲ್ಲಾ ಸದಸ್ಯರು, ಮುಖಂಡರು ಅಭಿನಂಧಿಸಿದರು.ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಗ್ರಾಪಂ ನೂತನ ಅಧ್ಯಕ್ಷೆ ಪ್ರಮೀಳ ಹೇಮಣ್ಣ ಅವರು ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ದಿಗೆ ಸದಸ್ಯರು ಜತೆಗೂಡಿ ಕೆಲಸ ಮಾಡಬೇಕು. ಸರಕಾರ ಯೋಜನೆ, ಸವಲತ್ತುಗಳನ್ನು ಜನರಿಗೆ ತಲುಪಿಸುವ ಪ್ರಮಾಣಿಕ ಕೆಲಸವನ್ನು ನಾವೆಲ್ಲರು ಜತೆಗೂಡಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರಕಾರಿ ಸೇವೆ ನಿಮ್ಮ ಮನೆ ಬಾಗಿಲಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದಲ್ಲಿ ಅರ್ಥ ಮಾಡಿಕೊಂಡು ಕೆಲಸ ಮಾಡಲು ಸ್ವಲ್ಪ ಕಷ್ಟವಾಗಿಯಿತು. ಇದೀಗ ಹಂತ ಹಂತವಾಗಿ ಬದಲಾವಣೆ ಮಾಡಿಕೊಂಡು ಸುಲಲಿತವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.ಕಂದಾಯ, ಆರ್‌ಟಿಸಿ ತಿದ್ದುಪಡಿ, ಆದಾಯ, ಜಾತಿ ಪ್ರಮಾಣ ಪತ್ರಗಳು, ಪೌತಿಖಾತೆಗಳು ಸೇರಿದಂತೆ ಅನೇಕ ಕೆಲಸಕಾರ್‍ಯಗಳು ಆಗಿವೆ. ಕೆನ್ನಾಳು ಗ್ರಾಮದಲ್ಲಿ ಸ್ವಾತಂತ್ರ್ಯ ಬಂದಬಳಿಕ ಇದೇ ಮೊದಲ ಬಾರಿಗೆ ಗ್ರಾಮಠಾಣ ವಿಸ್ತರಣೆ ಮಾಡುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದೇವೆ. ವಿದ್ಯುತ್ ಇಲಾಖೆ ವತಿಯಿಂದ 35 ಕಂಬ ಬದಲಾವಣೆ ಮಾಡಿದ್ದಾರೆ. ಸುಮಾರು 3 ಕಿಮೀ ವೈರ್ ಬದಲಾವಣೆ ಹಾಗೂ 6 ಟಿಸಿ ಹೊಸದಾಗಿ ಹಾಕಿದ್ದಾರೆ ಎಂದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಸಿ.ಬಿ.ತಮ್ಮಣ್ಣ, ಎಂ.ಕೆ.ಸ್ವಾಮೀಗೌಡ, ಸುದರ್ಶನ್, ಈರಾಚಾರಿ, ಅಭಿ, ವಸಂತ, ಜಯಲಕ್ಷ್ಮೀ, ಪಿಡಿಓ ಪುರುಷೋತ್ತಮ್, ಕಾರ್‍ಯದರ್ಶಿ ಜಯರಾಮು, ಮುಖಂಡರಾದ ಧರ್ಮರತ್ನಾಕರ, ಬಲರಾಮು, ಸೋಮಣ್ಣ, ಕೆ.ಜೆ.ಚನ್ನೇಗೌಡ, ಹೇಮಣ್ಣ, ಸಿ.ಸ್ವಾಮೀಗೌಡ ಸೇರಿದಂತೆ ಹಲವರು ಇದ್ದರು.